ಕಾಸರಗೋಡು: ರೈಲುಗಾಡಿ ಸಂಚರಿಸುವ ವೇಳೆ ಬೀಸಿದ ಬಲವಾದ ಗಾಳಿಗೆ ಸಿಲುಕಿ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಿಸಲ್ಪಟ್ಟ ಬಾಲಕಿ ಸಾವನ್ನಪ್ಪಿದ್ದಾಳೆ.
ಚೆಂಗಳ ನಾಲ್ಕನೇ ಮೈಲು ತೈವಳಪ್ಪು ನಿವಾಸಿ ಗಲ್ಪ್ ಉದ್ಯೋಗಿ ತಾಹೀರ್ ನಜಾದ್ -ಆಸಿಯ ದಂಪತಿ ಪುತ್ರಿ ಮರಿಯಂ ನವಾಲ್ ತಾಹೀರ್ (5) ಸಾವನ್ನಪ್ಪಿದ ಬಾಲಕಿ. ಈತಿಂಗಳ ೧೮ರಂದು ಸಂಜೆ ಅಜ್ಜಿ ಅಡ್ಕತ್ತಬೈಲಿನ ನಫೀಸ (52)ರ ಜೊತೆ ಮೊಗ್ರಾಲ್ ನಾಂಗಿಯಲ್ಲಿ ರೈಲು ಹಳಿಯ ಸಮೀಪ ನಡೆದುಹೋಗುತಿದ್ದ ವೇಳೆ ಮಂಗಳೂರಿನಿಂದ ತಿರುವನಂತಪುರಕ್ಕೆ ಸಂಚರಿಸಿದ ಮಾವೇಲಿ ಎಕ್ಸ್‌ಪ್ರೆಸ್ ರೈಲಿನ ಗಾಳಿಗೆ ಸಿಲುಕಿ ಮರಿಯಂ ನವಾಲ್ ಮತ್ತು ನಫೀಸ ಬಿದ್ದು ಗಾಯಗೊಂಡಿ ದ್ದರು. ಇವರಿಬ್ಬರು ಮೊಗ್ರಾಲ್‌ನಲ್ಲಿ ಮರಣ ಸಂಭವಿಸಿದ ಮನೆಗೆ ಹೋಗಿ ಹಿಂತಿರುಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಅದನ್ನು ಕಂಡ ಪ್ರಸ್ತುತ ರೈಲಿನ ಲೋಕೋ ಪೈಲೆಟ್ ನೀಡಿದ ಮಾಹಿತಿಯಂತೆ ಕುಂಬಳ ಪೊಲೀಸರು ಮತ್ತು ಊರವರು ಆಗಮಿಸಿ ಹುಡುಕಾಟ ನಡೆಸಿದಾಗ ಇಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಅಲ್ಲೇ ಪಕ್ಕದ ಪೊದೆಯಲ್ಲಿ ಬಿದ್ದಿರುವುದನ್ನು ಪತ್ತೆಹಚ್ಚಿದ್ದಾರೆ. ತಕ್ಷಣ ಚೆಂಗಳದ ಖಾಸಗಿ ಆ,ಸ್ಪತೆಗೆ ಸಾಗಿಸಿ ದಾಖಲಿಸ ಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ನಿನ್ನೆ ಸಾವನ್ನಪ್ಪಿದಳು. ನಫೀಸ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಮೃತಳು ಹೆತ್ತವರ ಹೊರತಾಗಿ ಸಹೋದರಿ ಫಾತಿಮತ್ ಇಶಾಲ್ ಮರಿಯಾಂ ಹಾಗೂ ಅಪಾರಬಂಧು-ಬಳಗವನ್ನು ಅಗಲಿದ್ದಾಳೆ.






