ಕಾಸರಗೋಡು: ರಾಜ್ಯದ ೧೭ ನದಿಗಳಿಂದ ಹೊಯ್ಗೆ ಸಂಗ್ರಹ ನಡೆಸಲು ಸರಕಾರ ಕ್ರಮ ಕೈಗೊಂಡಿದೆ. ಹೊಯ್ಗೆ ಆಡಿಟ್ ಪ್ರಕಾರ ಸಂಗ್ರಹಕ್ಕೆ ಯೋಗ್ಯವೆಂದು ಪತ್ತೆಹಚ್ಚಿದ ೧.೭ ಕೋಟಿ ಟನ್ ಹೊಯ್ಗೆ ನದಿಗಳಿಂದ ಡಿಸೆಂಬರ್ ವರೆಗೆ ಸಂಗ್ರಹಿಸಲಿರುವ ಕ್ರಮ ಈಗ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಉಪ್ಪಳ, ಮೊಗ್ರಾಲ್, ಚಂದ್ರಗಿರಿ ಹೊಳೆಗಳಿಂದ ಹೊಯ್ಗೆ ಸಂಗ್ರಹಕ್ಕೆ ಅನುಮತಿ ಲಭಿಸಲಿದೆ. ಇದರೊಂದಿಗೆ ಜಿಲ್ಲೆಯ ಅನಧಿಕೃತ ಹೊಯ್ಗೆ ಸಾಗಾಟಕ್ಕೆ ಮೂಗುದಾರ ಹಾಕಬಹುದೆಂದು ನಿರೀಕ್ಷಿಸಲಾಗಿದೆ.
ಹೊಳೆಗಳಲ್ಲಿ ಅಪರಿಮಿತವಾಗಿ ಹೊಯ್ಗೆ ಸಂಗ್ರಹ ರಾಶಿ ಬಿದ್ದಿರುವುದು ಸ್ವಾಭಾವಿಕ ಹರಿವಿಗೆ ತಡೆಯಾಗುತ್ತಿದೆ, ನದಿ ತಟದಲ್ಲಿ ಆಳ ಕಡಿಮೆಯಾಗುತ್ತಿದೆ ಎಂದು ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ. ಈ ಮಳೆಗಾಲದಲ್ಲಿ ಹೊಳೆ ಗತಿ ಬದಲಾಯಿಸಿ ಸಂಚರಿಸುವುದಕ್ಕೆ, ಪ್ರವಾಹಕ್ಕೆ ಸಮಾನವಾದ ನೆರೆಗೆ ಕಾರಣವಾಗುತ್ತಿದೆ ಎಂದು ಅಭಿಪ್ರಾಯಪಡಲಾಗಿದೆ. ನೆರೆ ಯನ್ನು ನಿಯಂತ್ರಿಸಲು ಹೊಯ್ಗೆ ಸಂಗ್ರಹ ಅನಿವಾರ್ಯವೆಂದು ಕಂದಾಯ ಇಲಾಖೆ ನಡೆಸಿದ ಸ್ಯಾಂಡ್ ಆಡಿಟ್‌ನಲ್ಲಿ ಪತ್ತೆಹಚ್ಚಿದ್ದು ಸರಕಾರ ಅದಕ್ಕೆ ಅಂಗೀಕಾರ ನೀಡಿದೆ. ಇನ್ನು ರಾಜ್ಯದ ಪರಿಸರ, ಜಿಯೋಲಜಿ ವಿಭಾಗಗಳ ಒಪ್ಪಿಗೆ ಲಭಿಸಬೇಕಾಗಿದೆ.
ಸರಕಾರದ ಭಾಗದಿಂದ ಅಂತಿಮ ತೀರ್ಮಾನ ಉಂಟಾದರೆ ಹೊಯ್ಗೆ ತೆಗೆಯುವುದಕ್ಕೆ ಹೊಣೆ ನೀಡುವುದು ಆಯಾ ಸ್ಥಳೀಯಾಡಳಿತ ಸಂಸ್ಥೆಗಳಿಗಾಗಿರುವುದು. ಜಿಲ್ಲೆಯ ಉಪ್ಪಳ ಹೊಳೆ ಮಂಗಲ್ಪಾಡಿ ಪಂಚಾಯತ್‌ನ ಅಧಿಕಾರಕ್ಕೆ ಲಭಿಸಲಿದೆ. ಮೊಗ್ರಾಲ್ ಹೊಳೆ ಕುಂಬಳೆ ಪಂಚಾಯತ್‌ಗೂ, ಚಂದ್ರಗಿರಿ ಹೊಳೆ ಚೆಮ್ನಾಡ್ ಪಂಚಾಯತ್‌ಗೂ ಲಭಿಸಲಿದೆ. ಇದರಿಂದ ಪಂಚಾಯತ್‌ಗಳಿಗೆ ಉತ್ತಮ ಆದಾಯ ಉಂಟಾಗುವ ನಿರೀಕ್ಷೆ ಇದೆ.






