ಸರಕಾರ ರಚನೆಗೆ ವಿ.ಡಿ. ಸತೀಶನ್‌ರಿಗೆ ರಾಜ್ಯಪಾಲ ಆಹ್ವಾನ:  ಪ್ರಮಾಣವಚನ ಸೋಮವಾರ

ತಿರುವನಂತಪುರ: ಚುನಾವಣಾ  ಫಲಿತಾಂಶ ಹೊರಬಂದ ದಿನದಿಂದ ಆರಂಭಗೊಂಡು ಸತತ ಹತ್ತು ದಿನಗಳ ತನಕ ದೀರ್ಘ ಚರ್ಚೆಯ ಬಳಿಕ ರಾಜ್ಯದ ನೂತನ ಮುಖ್ಯಮಂತ್ರಿ ಸ್ಥಾನಕ್ಕೆ ಆರಿಸಲ್ಪಟ್ಟ ಕಾಂಗ್ರೆಸ್ ನಾಯಕ ವಿ.ಡಿ. ಸತೀಶನ್   ಲೋಕಭವನ್‌ನಲ್ಲಿ ರಾಜ್ಯಪಾಲ ರಾಜೇಂದ್ರ ಅರ್ಲೇಕರ್‌ರನ್ನು ಸಂದರ್ಶಿಸಿ ಸರಕಾರ ರಚನೆಗಾಗಿರುವ ವಿದ್ಯುಕ್ತ ಹಕ್ಕು ಮಂಡನೆ ಸಲ್ಲಿಸಿದ್ದಾರೆ.  ಅದನ್ನು ರಾಜ್ಯಪಾಲರು ಅಂಗೀಕರಿಸಿದ್ದು, ಸರಕಾರ ರಚನೆಗೆ ವಿ.ಡಿ. ಸತೀಶನ್‌ರಿಗೆ ಆಹ್ವಾನ ನೀಡಿದ್ದಾರೆ. ಇದರಂತೆ ಸೋಮವಾರ  ಬೆಳಿಗ್ಗೆ 10 ಗಂಟೆಗೆ ತಿರುವನಂತಪುರದ ಸೆಂಟ್ರಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಅದ್ದೂರಿಯ ಸಮಾರಂಭದಲ್ಲಿ ವಿ.ಡಿ. ಸತೀಶನ್ ಕೇರಳದ 24ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಮುಖ್ಯಮಂತ್ರಿಯವರ ಹೊರತಾಗಿ ಸಚಿವ ಸಂಪುಟದಲ್ಲಿ ಒಟ್ಟು 20 ಮಂದಿ ಸಚಿವರು ಒಳಗೊಳ್ಳಲಿದ್ದು, ಅರೆಲ್ಲರೂ ಅದೇ ದಿನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪ್ರಮಾಣವಚನ ಸ್ವೀಕಾರ  ಸಮಾರಂಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಜೋಸೆಫ್, ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ, ತೆಲಂಗಾನ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ  ಪಕ್ಷದ ಇತರ ಹಲವು ವರಿಷ್ಠ ನೇತಾರರು ಭಾಗವಹಿಸಲಿದ್ದಾರೆ.

ವಿ.ಡಿ. ಸತೀಶನ್‌ರನ್ನು ಕಾಂಗ್ರೆಸ್ ಹೈಕಮಾಂಡ್ ನಿನ್ನೆ ಮುಖ್ಯಮಂತ್ರಿ ಸ್ಥಾನಕ್ಕೆ ಆರಿಸಿದ ಬೆನ್ನಲ್ಲೇ ಅವರನ್ನು ಶಾಸಕಾಂಗ ಸಭೆಯ ನೇತಾರರನ್ನಾಗಿ ಆರಿಸಲಾಯಿತು. ಕೇರಳದ ವಿಧಾನಸಭೆಯ ಒಟ್ಟು ಬಲದಲ್ಲಿ ಯುಡಿಎಫ್  102 ಸದಸ್ಯರ ಬಲ ಹೊಂದಿದೆ. ಎಡರಂಗ 35 ಮತ್ತು ಬಿಜೆಪಿಗೆ ಮೂವರು ಸದಸ್ಯರಿದ್ದಾರೆ. ತಲಾ ಐವರು ಶಾಸಕರಿಗೆ  ತಲಾ ಓರ್ವ ಎಂಬ ಅನುಪಾತದಲ್ಲಿ ಸಚಿವ ಸ್ಥಾನ ನೀಡುವ ಚಿಂತನೆ ಕಾಂಗ್ರೆಸ್ ನಡೆಸಿದೆ. ಹಾಗಾದಲ್ಲ್ಲಿ ಸಚಿವ ಸಂಪುಟದಲ್ಲಿ  21 ಸದಸ್ಯರು ಒಳಗೊಳ್ಳಲಿದ್ದಾರೆ. ಇದರಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಸ್ಥಾನ ಸೇರಿದಂತೆ 12 ಮಂದಿಗೆ ಸ್ಥಾನ ಲಭಿಸಲಿದೆ.

ಉಳಿದಂತೆ ಮುಸ್ಲಿಂ ಲೀಗ್‌ಗೆ 5, ಕೇರಳ ಕಾಂಗ್ರೆಸ್‌ಗೆ ಒಂದು ಸಚಿವ ಸ್ಥಾನ ಮತ್ತು ಮುಖ್ಯ ಸಚೇತಕ ಸ್ಥಾನ ಲಭಿಸುವ ಸಾಧ್ಯತೆ ಇದೆ. ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಮಾಜಿ ಗೃಹ ಸಚಿವರೂ ಆಗಿರುವ ತಿರುವಾಂಜೂರು ರಾಧಾಕೃಷ್ಣನ್‌ರನ್ನು ಸ್ಪೀಕರ್ ಸ್ಥಾನಕ್ಕೆ  ಕಾಂಗ್ರೆಸ್ ಪರಿಗಣಿಸುತ್ತಿದೆ. ಮಾತ್ರವಲ್ಲ ಉಪಸಭಾಪತಿ ಸ್ಥಾನವನ್ನು  ತನ್ನ ನಿಯಂತ್ರಣದಲ್ಲೇ ಉಳಿಸಿಕೊಳ್ಳುವ  ಪ್ರಯತ್ನದಲ್ಲಿ ಕಾಂಗ್ರೆಸ್ ತೊಡಗಿದೆ. ಯುಡಿಎಫ್‌ನ ಇದರ ಘಟಕ ಪಕ್ಷಗಳಾದ ಆರ್‌ಎಸ್‌ಪಿ, ಸಿಎಂಪಿ ಮತ್ತು ಕೆಡಿಪಿಗೂ ಸಚಿವ ಸ್ಥಾನ ಲಭಿಸಲಿದೆ.

ಮುಸ್ಲಿಂ ಲೀಗ್‌ಗೆ ಐದು ಸಚಿವ ಸ್ಥಾನ ಲಭಿಸುವ ಹಾಗಿದ್ದಲ್ಲಿ ಮಂಜೇಶ್ವರ ಶಾಸಕ ಎಕೆಎಂ ಅಶ್ರಫರಿಗೆ ಸಚಿವ ಸ್ಥಾನ ಲಭಿಸಲಿದೆ ಎಂಬ ಕಾತರ ಜಿಲ್ಲೆಯ ಮುಸ್ಲಿಂ ಲೀಗ್ ಕಾರ್ಯಕರ್ತರಲ್ಲಿ ಉಂಟಾಗಿದೆ.

You cannot copy contents of this page