ಮಂಜೇಶ್ವರ : ಹೊಳೆಯಿಂದ ಅನಧಿಕೃತವಾಗಿ ಮರಳು ಸಾಗಾಟ ನಡೆಸುತ್ತಿದ್ದ ಲಾರಿಯನ್ನು ಮಂಜೇಶ್ವರ ಪೊಲೀಸರು ವಶಪಡಿಸಿ ಚಾಲಕನನ್ನು ಸೆರೆ ಹಿಡಿದಿದ್ದಾರೆ. ಲಾರಿ ಚಾಲಕ ಮಂಗಳೂರು ಪನೆಲ್ ಪಜೀರ್ ವಂಟೆ ಮಜಲ್ ನಿವಾಸಿ ರಸಾದ್ (18) ಸೆರೆಗೀಡಾದ ವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ಬೆಳಿಗ್ಗೆ ವರ್ಕಾಡಿ ಗ್ರಾಮದ ಕೋಣಿಬಯಲು ಎಂಬಲ್ಲಿ ಮಂಜೇಶ್ವರ ಠಾಣೆಯ ಎಸ್.ಐ ರತೀಶ್ ಹಾಗೂ ಉಪ್ಪಳ ಕಂಟ್ರೋಲ್ ರೂಮ್ ನ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ದಾರಿಯಾಗಿ ಮರಳು ಹೇರಿದ ಲಾರಿ ಆಗಮಿಸಿದೆ. ತಪಾಸಣೆ ನಡೆಸಿದಾಗ ಅದು ಕಳಾಯಿ ಹೊಳೆಯಿಂದ ಅನಧಿಕೃತವಾಗಿ ಸಂಗ್ರಹಿಸಿದ ಮರಳು ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಮರಳು ಸಹಿತ ಲಾರಿಯನ್ನು ವಶಕ್ಕೆ ತೆಗೆದು ಚಾಲಕನನ್ನು ಬಂಧಿಸಿ ಮರಳು ಕಳವು ಪ್ರಕರಣ ದಾಖಲಿಸಲಾಗಿದೆ. ಆರೋಪಿಗೆ ನ್ಯಾಯಾಲಯ ರಿಮಾoಡ್ ವಿಧಿಸಿದೆ. ಹೊಳೆಗಳಿಂದ ಅನಧಿಕೃತ ಮರಳು ಸಾಗಾಟದ ವಿರುದ್ಧ ಮಂಜೇಶ್ವರ ಸಿ. ಐ ಜಿಜೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ತೀವ್ರಗೊಳಿಸಿದ್ದು ವಿವಿಧಡೆ ವಾಹನ ತಪಾಸಣೆ, ದಾಳಿ ನಡೆಸಲಾಗುತ್ತಿದೆ.






