ಕಾಸರಗೋಡು: ಭಾರತ ಸರಕಾರದ ಸಂಸ್ಕೃತಿ ಸಚಿವಾಲಯ, ಸವಾಕ್ ಮತ್ತು ಥಿಯೇಟ್ರಿಕ್ಸ್ ಕಾಸರಗೋಡು ಇವುಗಳ ಸಹಕಾರದೊಂದಿಗೆ ರಂಗಶಂಕರ ಬೆಂಗಳೂರು ಹಮ್ಮಿಕೊಳ್ಳುವ ಈ ಬಾರಿಯ ಕನ್ನಡ ನಾಟಕೋತ್ಸವ ಕಾಸರಗೋಡಿನಲ್ಲಿ ನಡೆಯಲಿದೆ. ವಿವಿಧ ಜಿಲ್ಲೆಗಳಿಂದ ನಾಲ್ವರು ನಿರ್ದೇಶಕರು ಹಾಗೂ ನಾಲ್ಕು ತಂಡಗಳನ್ನೊಳಗೊಂಡ ನಾಟಕೋತ್ಸವ ನಾಳೆಯಿಂದ ೨೪ರವರೆಗೆ ಸಂಜೆ ೭ಕ್ಕೆ ಕಾಸರಗೋಡು ಪಿಲಿಕುಂಜೆ ಟೌನ್‌ಹಾಲ್‌ನಲ್ಲಿ ಪ್ರದರ್ಶನಗೊಳ್ಳಲಿದೆ.
ನಾಳೆ ನಿಸರ್ಗಪ್ರಿಯ ರಚಿಸಿ ಮಂಜುನಾಥ ಎಲ್ ಬಡಿಗೇರ ನಿರ್ದೇಶಿಸಿದ ‘ಶುನಶ್ಯೇಪ’ ನಾಟಕವನ್ನು ಒಡ್ಡೋಲಗ ರಂಗಪರ್ಯಟನೆ ಹಿತ್ತಲಕೈ (ಸಿದ್ಧಾಪುರ) ತಂಡ ಪ್ರದರ್ಶಿಸಲಿದೆ. ೨೨ರಂದು ವಿವೇಕ ಶಾನಭಾಗ ರಚಿಸಿ ಶ್ರೀನಿವಾಸಮೂರ್ತಿ ನಿರ್ದೇಶಿಸಿದ ‘ಬಹುಮುಖಿ’ ನಾಟಕವನ್ನು ರಂಗಾರಂಭ, ಗಳಿಗೇನಹಳ್ಳಿ ತಂಡ ಪ್ರದರ್ಶಿಸಲಿದೆ. ೨೩ರಂದು ಸಂಧ್ಯಾ ಎಸ್. ರಚಿಸಿರುವ ನಕ್ಷತ್ರ ಯಾತ್ರಿಕರು ನಾಟಕವನ್ನು ಸವಿತ ಬೈರಪ್ಪ ನಿರ್ದೇಶನದಲ್ಲಿ ಆಯಾಮ ಬೆಂಗಳೂರು ಪ್ರದರ್ಶಿಸಲಿದೆ. ೨೪ರಂದು ಕುವೆಂಪು ಅವರು ರಚಿಸಿದ ಬೆರಳ್ಗೆ ಕೊರಳ್ ನಾಟಕವನ್ನು ಗಜಾನನ ಯುವಕ ಮಂಡಳಿ ಶೇಷಗಿರಿ ತಂಡ ಪ್ರದರ್ಶಿಸಲಿದೆ. ಈ ಬಗ್ಗೆ ವಿವರಿಸಲು ಕಾಸರಗೋಡು ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಉಮೇಶ್ ಸಾಲ್ಯಾನ್, ದಿವಾಕರ ಕೆ., ಟಿ.ವಿ. ಗಂಗಾಧರನ್, ಟಿ.ಎ. ಶಾಫಿ ಮೊದಲಾದವರು ಭಾಗವಹಿಸಿ ಮಾಹಿತಿ ನೀಡಿದರು. ಕನ್ನಡದ ಯುವ ನಿರ್ದೇಶಕರನ್ನು ಮತ್ತು ರಂಗಕರ್ಮಿಗಳನ್ನು ಪ್ರೋತ್ಸಾಹಿಸುವುದೇ ಈ ಕನ್ನಡ ನಾಟಕೋತ್ಸವದ ಮುಖ್ಯ ಉದ್ದೇಶವಾಗಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.






