ಕಾಸರಗೋಡು: ಖ್ಯಾತ ಕವಿಯಾಗಿದ್ದ, ನಾಡೋಜ ಕಯ್ಯಾರ ಕಿಞ್ಞಣ್ಣ ರೈಯವರ ಹೆಸರಿನಲ್ಲಿ ಬದಿಯಡ್ಕದಲ್ಲಿ ಕಿಞ್ಞಣ್ಣ ರೈಯವರ ಕುಟುಂಬ ನೀಡಿದ ಸ್ಥಳದಲ್ಲಿ ನಿರ್ಮಿಸಿದ ಕನ್ನಡ ಭವನದ ಉದ್ಘಾಟನೆಯನ್ನು ಮುಂದೂಡಲಾಗಿದೆ. ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನಿಧಿಯಿಂದ 2 ಕೋಟಿ ರೂ. ವೆಚ್ಚ ಮಾಡಿ ನಿರ್ಮಿಸಿದ ಕನ್ನಡಭವನವನ್ನು ಈ ತಿಂಗಳ 3೦ರಂದು ಉದ್ಘಾಟಿಸುವುದ ಕ್ಕಾಗಿ ಈ ಮೊದಲು ತೀರ್ಮಾನಿಸಲಾ ಗಿತ್ತು. ಆದರೆ ಕೇರಳ ಕರ್ನಾಟಕದ ಮುಖ್ಯಮಂತ್ರಿಗಳನ್ನು ಪಾಲ್ಗೊಳ್ಳಿಸುವಂತೆ ಮಾಡಲು ದಿನಾಂಕ ಮುಂದೂಡಲಾಗಿ ದೆಯೆಂದು ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ನಿನ್ನೆ ಕಾಸರಗೋಡು ಸರಕಾರಿ ಅತಿಥಿ ಗೃಹದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕರ್ನಾಟಕ ಹಾಗೂ ಕೇರಳದ ವಿಧಾನಸಭಾ ಅಧಿವೇಶನ ಈಗ ನಡೆ ಯುತ್ತಿರುವ ಹಿನ್ನೆಲೆಯಲ್ಲಿ ಮುಖ್ಯ ಮಂತ್ರಿ, ಸಚಿವರು, ಶಾಸಕರು ಲಭ್ಯವಾಗ ದಿರುವ ಕಾರಣ ಕಾರ್ಯಕ್ರಮವನ್ನು ಡಿಸೆಂಬರ್ ಮಧ್ಯದಲ್ಲಿ ಉದ್ಘಾಟಿಸುವುದಾಗಿ ಅವರು ತಿಳಿಸಿದ್ದಾರೆ.
2023 ಮಾರ್ಚ್ನಲ್ಲಿ ಶಿಲಾನ್ಯಾಸಗೈದು ನಿರ್ಮಾಣ ಆರಂಭಿಸಲಾದ ಕನ್ನಡ ಭವನದ ಹೆಚ್ಚಿನ ಕಾಮಗಾರಿಗಳು ಈಗಾಗಲೇ ಪೂರ್ತಿಗೊಂಡಿದ್ದು, ಉಳಿದ ಕೆಲಸಗಳು ಈಗ ನಡೆಯುತ್ತಿದೆ. ಈ ಬಗ್ಗೆ ನಿನ್ನೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಪದಾಧಿಕಾರಿಗಳಾದ ಮಾಹಿನ್ ಕೇಳೋಟ್, ತಾರಾನಾಥ ರೈ, ಎ.ಆರ್. ಸುಬ್ಬಯ್ಯಕಟ್ಟೆ, ಅಖಿಲೇಶ್ ನಗುಮುಗಂ, ಕಿಞ್ಞಣ್ಣ ರೈಯವರ ಪುತ್ರ ಪ್ರಸನ್ನ ರೈ ಭಾಗವಹಿಸಿದ್ದರು.





