ಮುಳ್ಳೇರಿಯ: ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ ಇಂದು ಬೆಳಿಗ್ಗೆ ಮುಳ್ಳೇರಿಯ ಜಿವಿಎಚ್ಎಸ್ಎಸ್ನಲ್ಲಿ ಆರಂಭಗೊಂಡಿತು. ಇಂದು ಬೆಳಿಗ್ಗೆ ಶಾಲಾ ಪ್ರಾಂಶುಪಾಲೆ ಸುಧಾ ಎ.ವಿ. ಧ್ವಜಾರೋಹಣ ನಡೆಸುವ ಮೂಲಕ ಕಲೋತ್ಸವಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಪಿಟಿಎ ಅಧ್ಯಕ್ಷ ಸತೀಶ್, ಕಾರ್ಯಕ್ರಮದ ಜನರಲ್ ಕನ್ವೀನರ್ ಶಾಹುಲ್ ಹಮೀದ್ ಮಾಸ್ಟರ್, ವಿಎಚ್ಎಸ್ಇ ಪ್ರಾಂಶುಪಾಲ ಕುರಿಯನ್, ಎಸ್ಎಂಸಿ ಚೆಯರ್ಮೆನ್ ಮೋಹನ್ ಮೊದಲಾದವರು ಉಪಸ್ಥಿತ ರಿದ್ದರು. ಉಪಜಿಲ್ಲೆಯ 98 ಶಾಲೆಗಳಿಂದ 6000ದಷ್ಟು ಮಕ್ಕಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಂಗವಾಗಿ ನಿನ್ನೆ ಮುಳ್ಳೇರಿಯ ಪೇಟೆಯಲ್ಲಿ ಡಂಗುರ ಮೆರವಣಿಗೆ ನಡೆಯಿತು. ಯಕ್ಷಗಾನ ವೇಷ, ಚೆಂಡೆಮೇಳ, ಮುತ್ತುಕೊಡೆ, ಸ್ಕೌಟ್, ಜೆಆರ್ಸಿ, ಎನ್ಎಸ್ಎಸ್, ಲಿಟ್ಸ್ ಕೈಟ್ ಸಹಿತ ವಿದ್ಯಾರ್ಥಿಗಳು ಸಮವಸ್ತ್ರದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮುಳ್ಳೇರಿಯ ಗಜಾನನ ಶಾಲಾ ಪರಿಸರದಿಂದ ಹೊರಟ ಡಂಗುರ ಮೆರವಣಿಗೆ ಪೇಟೆ ಮೂಲಕ ಸಾಗಿ ಮುಳ್ಳೇರಿಯ ಜಿವಿಎಚ್ಎಸ್ಎಸ್ನಲ್ಲಿ ಕೊನೆಗೊಂಡಿತು. ಕಲೋತ್ಸವ ಈ ತಿಂಗಳ 15ರವರೆಗೆ ನಡೆಯಲಿದೆ.







