ಪೆರ್ಲ: ಸರಕಾರಿ ಹಣವನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸದಿರುವುದರ ಪ್ರತ್ಯಕ್ಷ ಉದಾಹರಣೆಯಾಗಿ ಎಣ್ಮಕಜೆ ಪಂಚಾಯತ್‌ನ 16ನೇ ವಾರ್ಡ್ ಬೆದ್ರಂಪಳ್ಳ ಬನ ರಸ್ತೆ ಕಂಡು ಬರುತ್ತಿದೆ. ಸುಮಾರು 2.800 ಕಿಲೋ ಮೀಟರ್ ರಸ್ತೆಯ ಅಭಿವೃದ್ಧಿಗಾಗಿ 2023-24 ನೇ ವರ್ಷದ ಮುಂಗಡ ಪತ್ರದಲ್ಲಿ 70 ಲಕ್ಷ ರೂ. ಮೀಸಲಿಡಲಾಗಿತ್ತು. ಹಲವಾರು ವರ್ಷಗಳಿಂದ ಸಂಚಾರ ದುಸ್ತರಗೊಂಡ ಬೆದ್ರಂಪಳ್ಳ ಬನ- ಬಲ್ತಕಲ್ಲು- ಪಾಟ್ಲದಳ ಸಂಪರ್ಕ ರಸ್ತೆಯನ್ನು ದುರಸ್ತಿಗೊಳಿಸಬೇಕೆಂಬ ಜನರ ಬೇಡಿಕೆಯಂತೆ ಶಾಸಕ ಎಕೆಎಂ ಅಶ್ರಫ್‌ರ ಒತ್ತಡದಿಂದ ಮೊತ್ತ ಮಂಜೂರಾಗಿತ್ತು. 2025 ಜೂನ್ 23ರಂದು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.
ಆದರೆ ಕಾಮಗಾರಿ ಆರಂಭದಲ್ಲೇ ಕಳಪೆ ಮಟ್ಟದಲ್ಲಿದೆ ಎಂದು ತಿಳಿದುಕೊಂಡ ಸ್ಥಳೀಯರು ಇತ್ತೀಚೆಗೆ ಕಾಮಗಾರಿಗೆ ತಡೆಯೊಡ್ಡಿದ್ದರು. ರಸ್ತೆಯ ಎಸ್ಟಿಮೇಟ್‌ನಲ್ಲಿ ಅಭಿವೃದ್ಧಿ ಕಾಮಗಾರಿ ಹೇಗೆ ನಡೆಸಬೇಕಾಗಿತ್ತೋ ಅದನ್ನೆಲ್ಲಾ ಮರೆಮಾಚಿ ಕಳಪೆ ಮಟ್ಟದಲ್ಲಿ ಕಾಮಗಾರಿ ನಡೆಸಲಾಗಿದೆ ಎಂದು ಸ್ಥಳೀಯರು ದೂರಿ ಕಾಮಗಾರಿಗೆ ತಡೆಯೊಡ್ಡಿದ್ದರು. ಬಳಿಕ ಪಂಚಾಯತ್, ಬ್ಲೋಕ್, ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಸೂಕ್ತ ರೀತಿಯಲ್ಲಿ ರಸ್ತೆ ಅಭಿವೃದ್ಧಿ ನಡೆಸುವ ಭರವಸೆ ನೀಡಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ರಸ್ತೆಗೆ ಡಾಮರು ಹಾಕುವ ವೇಳೆ ಕೆಲವು ಕಡೆಗಳಲ್ಲಿ ಹಳೆಯ ಡಾಮರನ್ನು ತೆಗೆದು ಹಾಕಬೇಕೆಂದು ಎಸ್ಟಿಮೇಟ್‌ನಲ್ಲಿ ವಿವರಿಸಲಾಗಿದ್ದು, ಆದರೆ ಸ್ಥಳೀಯರಿಲ್ಲದ ಸಮಯದಲ್ಲಿ ರಸ್ತೆಯ ಮೇಲೆ ಡಾಮರು ಹಾಕಿ ತೇಪೆ ಹಚ್ಚುವ ಕೆಲಸ ನಡೆಸುವ ವೇಳೆ ಸ್ಥಳೀಯರು ಒಟ್ಟಾಗಿ ಕಾಮಗಾರಿಯನ್ನು ತಡೆದಿದ್ದಾರೆ. ಬಳಿಕ ಬಂದ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್, ಜಿಲ್ಲಾ ಎಕ್ಸಿಕ್ಯೂಟಿವ್ ಇಂಜಿನಿಯರ್‌ಗಳು ರಸ್ತೆ ದುರಸ್ತಿಯನ್ನು ಸರಿಯಾದ ರೀತಿಯಲ್ಲಿ ನಡೆಸುವುದಕ್ಕೆ ಗುತ್ತಿಗೆದಾರರಿಗೆ ಸೂಚಿಸಿದ್ದಾರೆನ್ನಲಾಗಿದೆ.
ಎಣ್ಮಕಜೆ ಪಂಚಾಯತ್ ಸದಸ್ಯ ರಾಧಾಕೃಷ್ಣ ನಾಯಕ್ ಶೇಣಿ ಮುತುವರ್ಜಿ ವಹಿಸಿ ರಸ್ತೆ ಅಭಿವೃದ್ಧಿಗೆ ಶಾಸಕರಲ್ಲಿ ಒತ್ತಡ ಹೇರಿದ್ದರು. ಬಳಿಕ ರಸ್ತೆಗೆ ಹಣ ಮಂಜೂರು ಮಾಡಲಾಗಿದೆ. ರಸ್ತೆಯ ಟೆಂಡರನ್ನು ಪೆರ್ಲದ ಗುತ್ತಿಗೆದಾರರೊಬ್ಬರಿಗೆ ವಹಿಸಿಕೊಡಲಾಗಿತ್ತು. ಆದರೆ ಈಗ ರಸ್ತೆಯ ಅಗಲ, ಚರಂಡಿ, ಬದಿಯಲ್ಲಿ ಕಾಂಕ್ರೀಟ್ ಹಾಕುವ ಕಾಮಗಾರಿಗಳು ನಡೆಸಬೇಕಾಗಿರುವಲ್ಲಿ ಅದನ್ನು ಸೂಕ್ತ ರೀತಿಯಲ್ಲಿ ನಡೆಸುತ್ತಿಲ್ಲವೆಂದು ಸ್ಥಳೀಯರು ದೂರಿದ್ದಾರೆ.
ಸುಮಾರು 150 ಕುಟುಂಬಗಳು ದಿನನಿತ್ಯ ಉಪಯೋಗಿಸುವ ಈ ರಸ್ತೆಯನ್ನು ಸಮರ್ಪಕವಾದ ರೀತಿಯಲ್ಲಿ ಅಭಿವೃದ್ಧಿ ಪಡಿಸಬೇಕೆಂದು, ಇಲ್ಲದಿದ್ದರೆ ವಿಜಿಲೆನ್ಸ್, ನ್ಯಾಯಾಲಯದ ಮೊರೆ ಹೋಗುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.






