ಆಪರೇಶನ್ ತೂಫಾನ್ : ವಿವಿಧೆಡೆಗಳಿಂದ ಎಂಡಿಎಂಎ ವಶ: ಒಟ್ಟು 45 ಪ್ರಕರಣಗಳು ದಾಖಲು, 50 ಮಂದಿ ಸೆರೆ

ಕಾಸರಗೋಡು: ಮಾದಕದ್ರವ್ಯದ ಬೇಟೆಗಾಗಿ ಪೊಲೀಸರು ರಾಜ್ಯಾದ್ಯಂತ ಆರಂಭಿಸಿರುವ ಆಪರೇಶನ್ ತೂಫಾನ್ ಕಾರ್ಯಾಚರಣೆಯಂತೆ ಕಾಸರಗೋಡು ಪೊಲೀಸರು ನಿನ್ನೆ ರಾತ್ರಿ ನಗರದ ಪಳ್ಳಂನ ಮನೆಯೊಂದಕ್ಕೆ ನಡೆಸಿದ ದಾಳಿಯಲ್ಲಿ ಮಾದಕವಸ್ತುವಾದ ೪೭ ಗ್ರಾಂ ಎಂಡಿಎಂಎ ಪತ್ತೆಹಚ್ಚಿ ವಶಪಡಿಸಿಕೊಂ ಡಿದ್ದಾರೆ. ಇದಕ್ಕೆ ಸಂಬಂಧಿಸಿ ಬೈತುಲ್ ನೂರ್ ನಿವಾಸಿ ಅಬ್ದುಲ್ ನಸೀರ್ (40) ಎಂಬಾತ ನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.

ಇದೇ ರೀತಿ ಬದಿಯಡ್ಕ, ಕುಂಬಳೆ ಮತ್ತು ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಾಗಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಬದಿಯಡ್ಕ ಪೊಲೀಸ್ ಠಾಣೆಯ ಎಸ್‌ಐ ಟಿ. ರೂಪೇಶ್ ನೇತೃತ್ವದ ಪೊಲೀಸರ ತಂಡ ಬದಿಯಡ್ಕದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 28.99 ಗ್ರಾಂ ಎಂಡಿಎಂಎ ವಶಪಡಿಸಿದೆ. ಈ ಸಂಬಂಧ ಪುತ್ತಿಗೆ ಕಟ್ಟತ್ತಡ್ಕ ಎ.ಕೆ.ಜಿ ನಗರದ ಎ. ಮೊಹಮ್ಮದ್ ಹನೀಫ ಅಲಿಯಾಸ್ ಕಾಕಾ ಹನೀಫಾ (37) ಎಂಬಾತನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಬದಿಯಡ್ಕ-ಮುಳ್ಳೇರಿಯ  ರಸ್ತೆ ಮೂಲಕ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಹನೀಫಾನನ್ನು ಪೊಲೀಸರು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಆತನ ಕೈವಶವಿದ್ದ ಎಂಡಿಎಂಎ ಪತ್ತೆಯಾಗಿದೆ. ಇದರ ಹೊರತಾಗಿ ಆತನಿಂದ ೨೯,೫೦೦ ರೂ., ಮೊಬೈಲ್ ಫೋನ್ ಮತ್ತು ಬೈಕ್‌ನ್ನು ವಶಕ್ಕೆ ತೆಗೆದುಕೊಳ್ಳಲಾಗಿ ದೆಯೆಂದು ಪೊಲೀಸರು ತಿಳಿಸಿದ್ದಾರೆ.

ಇದೇ ರೀತಿ ಸೀತಾಂಗೋಳಿ-ಉಳಿಯತ್ತಡ್ಕ ರಸ್ತೆ ಬಳಿಯ ದ್ವಿ ಅಂತಸ್ತು ಕಟ್ಟಡವೊಂದರ ಕೊಠಡಿಯಲ್ಲಿ ಕುಂಬಳೆ ಠಾಣೆ ಎಸ್.ಐ ಅನಂತಕೃಷ್ಣನ್ ಆರ್ ಮೆನೋನ್ ನೇತೃತ್ವದ ಪೊಲೀಸರು ನಿನ್ನೆ ಮುಂಜಾನೆ ನಡೆಸಿದ ಕಾರ್ಯಾ ಚರಣೆಯಲ್ಲಿ 11.97 ಗ್ರಾಂ ಎಂಡಿಎಂಎ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ   ಮುಗು ರಸ್ತೆ ಉರ್ಮಿಯ ಶಬೀರ್ ಅಲಿ (45) ಎಂಬಾತನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

 ಇದರ ಹೊರತಾಗಿ  ಬೇಕಲ ಎಸ್‌ಐ ಅಖಿಲ್ ಸೆಬಾಸ್ಟಿನ್ ನೇತೃತ್ವದ ಪೊಲೀಸರು  ಪನಯಾಲ್‌ನ ಮವ್ವಲ್ ಕ್ವಾರ್ಟರ್ಸ್‌ವೊಂದಕ್ಕೆ ದಾಳಿ ನಡೆಸಿ 3.1 ಗ್ರಾಂ  ಎಂಡಿಎಂಎ ಪತ್ತೆಹಚ್ಚಿದ್ದಾರೆ. ಇದಕ್ಕೆ ಸಂಬಂಧಿಸಿ ಪ್ರಸ್ತುತ ಕ್ವಾರ್ಟರ್ಸ್ ನಲ್ಲಿ ವಾಸಿಸುವ  ಮೂಲತಃ ಪಳ್ಳಿಕ್ಕೆರೆ ಕಲ್ಲಿಂಗಾಲ್ ನಿವಾಸಿ ಕೆ.ಶಾಹುಲ್ ಹಮೀದ್ (31)  ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ನಿನ್ನೆ ಸಂಜೆ 4 ಗಂಟೆಗೆ ಬಂಗ್ರಮಂಜೇಶ್ವರ ಕಜೆ ಎಂಬಲ್ಲಿ  ಮಂಜೇಶ್ವರ ಎಸ್.ಐ ಉಮೇಶ್ ಕೆ. ಆರ್ ನಡೆಸಿದ ಕಾರ್ಯಾಚರಣೆಯಲ್ಲಿ  0.15 ಗ್ರಾಂ ಎಂಡಿಎಂಎ ವಷಶಪಡಿಸಲಾಗಿದೆ. ಈ ಸಂಬಂಧ ಮೂಲತಃ ಪಾವೂರು ನಿವಾಸಿ ಪ್ರಸ್ತುತ ದುರ್ಗಿಪಳ್ಳದ ಶಮೀರ್  ಶಾ ಮಂಜಿಲ್‌ನಲ್ಲಿ ವಾಸಿಸುವ  ಅಬೂಬಕರ್ ಶಫೀಕ್ (24) ಎಂಬಾತನನ್ನು ಬಂಧಿಸಲಾಗಿದೆ. ರಾತ್ರಿ 8 ಗಂಟೆಗೆ ಬಂಗ್ರಮಂಜೇಶ್ವರ ಶ್ರೀ ಕಾಳಿಕಾಪರಮೇಶ್ವರಿ ಕ್ಷೇತ್ರ ರಸ್ತೆಯಲ್ಲಿ 0.19 ಗ್ರಾಂ ಎಂಡಿಎಂಎ ಸಹಿತ ಓರ್ವ ಸೆರೆಗೀಡಾಗಿದ್ದಾನೆ. ಮೂಲತಃ ಪಾವೂರು ನಿವಾಸಿ ಪ್ರಸ್ತುತ ಮಜಿಬೈಲು ಬ್ಯಾಂಕ್ ಸಮೀಪ ಫಾತಿಮ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಇಸ್ಮಾಯಿಲ್ ರಾಸಿಕ್ (22) ಎಂಬಾತನನ್ನು ಎಸ್‌ಐ ಶಬರಿಕೃಷ್ಣನ್ ಬಂಧಿಸಿದ್ದಾರೆ.

ಅದೇ ರೀತಿ ನಿನ್ನೆ ರಾತ್ರಿ ಹೊಸಂಗಡಿ ಪೇಟೆಯಲ್ಲಿ ಎಂಡಿಎಂಎ ಬಳಸುತ್ತಿದ್ದ ಓರ್ವನನ್ನು ಎಸ್‌ಐ ಶಬರಿಕೃಷ್ಣನ್ ಬಂಧಿಸಿದ್ದಾರೆ. ಕುಂಜತ್ತೂರು ಮಾಸ್ಕೋ ಹಾಲ್ ಬಳಿಯ ನಿಯಾಸ್ ಮಂಜಿಲ್‌ನ  ನಿಯಾಸ್ ಕೆ.ಐ (29) ಎಂಬಾತ ಬಂಧಿತ ವ್ಯಕ್ತಿಯಾಗಿದ್ದಾನೆ. ಈ ಮೂವರಿಗೆ ನೋಟೀಸು ನೀಡಿ ಬಿಡುಗಡೆ ಮಾಡಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಆಪರೇಶನ್ ತೂಫಾನ್ ಯೋಜನೆಯಂತೆ ಜಿಲ್ಲಾ  ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿಯವರ ನಿರ್ದೇಶದಂತೆ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಗಳಲ್ಲಾಗಿ ಪೊಲೀಸರು ಕಾರ್ಯಾಚರಣೆಗೆ ಚಾಲನೆ ನೀಡಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 45 ಪ್ರಕರಣಗಳನ್ನು ದಾಖಲಿಸಲಾಗಿದೆ. ಇದಕ್ಕೆ ಸಂಬಂಧಿಸಿ ಒಟ್ಟು 50 ಮಂದಿಯನ್ನು ಬಂಧಿಸಲಾಗಿದೆ.

RELATED NEWS

You cannot copy contents of this page