ಶಬರಿಮಲೆ ಗರ್ಭಗುಡಿ ಬಾಗಿಲು, ದ್ವಾರಪಾಲಕ ಮೂರ್ತಿಗಳು ತಾಮ್ರದ್ದಾಗಿದೆಯೆಂದು ತಿದ್ದಿ ಬರೆದದ್ದು ಎ. ಪದ್ಮಕುಮಾರ್

ಪತ್ತನಂತಿಟ್ಟ: ಶಬರಿಮಲೆ ಶ್ರೀ ಅಯ್ಯಪ್ಪ ಕ್ಷೇತ್ರದ ಗರ್ಭಗುಡಿಯ ಬಾಗಿಲು ಮತ್ತು ದ್ವಾರಪಾಲಕ ಮೂರ್ತಿಗಳು ತಾಮ್ರದ್ದಾಗಿದೆಯೆಂದು  ಮುಜರಾಯಿ ಮಂಡಳಿಯ ಕಾರ್ಯಸೂಚಿಯಲ್ಲಿ ತಿದ್ದಿ ಬರೆದದ್ದು ಮುಜರಾಯಿ ಮಂಡಳಿಯ ಮಾಜಿ ಅಧ್ಯಕ್ಷ ಎ. ಪದ್ಮಕುಮಾರ್ ಆಗಿದ್ದಾರೆಂದು ವಿಶೇಷ ತನಿಖಾ ತಂಡ ನ್ಯಾಯಾಲಯಕ್ಕೆ ಸಲ್ಲಿಸಿದ  ರಿಮಾಂಡ್ ವರದಿಯಲ್ಲಿ  ತಿಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿ  ಬಂಧಿತರಾಗಿರುವ  ಪದ್ಮಕುಮಾರ್ ನ್ಯಾಯಾಂಗ ಬಂಧನದಲ್ಲಿದ್ದಾರೆ.  ಶಬರಿಮಲೆಯಲ್ಲಿ ನಡೆದ ವಂಚನೆಗೆ ಪದ್ಮಕುಮಾರ್ ಮತ್ತು ಇತರ ಆರೋಪಿಗಳು ಭಾರೀ ಒಳಸಂಚು ಹೂಡಿದ್ದಾರೆಂದು ವರದಿಯಲ್ಲಿ ತಿಳಿಸಲಾಗಿದೆ.

ಇದೇ ವೇಳೆ ಶಬರಿಮಲೆ ಕ್ಷೇತ್ರದ ಚಿನ್ನ ಕಳವು ಪ್ರಕರಣದಲ್ಲಿ ಸೆರೆಗೀಡಾದ ಎ ಪದ್ಮಕುಮಾರ್‌ರ ಹೇಳಿಕೆಯ ಆಧಾರದಲ್ಲಿ ಇನ್ನಷ್ಟು ಮಂದಿಯನ್ನು ತನಿಖೆಗೊಳಪಡಿಸಲು ತನಿಖಾ ತಂಡ ನಿರ್ಧರಿಸಿದೆ.  ಶಬರಿಮಲೆಯಲ್ಲಿ ಪ್ರಾಯೋಜಕರಾಗಲು ಆಸಕ್ತಿ ತೋರಿ ಉಣ್ಣಿಕೃಷ್ಣನ್ ಪೋತ್ತಿ ಮಾಜಿ ದೇವಸ್ವಂ ಸಚಿವ ಕಡಗಂಪಳ್ಳಿ ಸುರೇಂದ್ರನ್‌ರನ್ನು  ಭೇಟಿಯಾಗಿರುವುದಾಗಿ ಪದ್ಮಕುಮಾರ್ ಹೇಳಿಕೆ ನೀಡಿದ್ದಾರೆ.  ಈ ವಿಷಯದಲ್ಲಿ ಇನ್ನಷ್ಟು ಮಾಹಿತಿ ಸಂಗ್ರಹಿಸಲು ಪದ್ಮಕುಮಾರ್‌ರನ್ನು ಸೋಮವಾರ ಕಸ್ಟಡಿಗೆ ಪಡೆಯಲು ತನಿಖಾ ತಂಡ ನಿರ್ಧರಿಸಿದೆ.

You cannot copy contents of this page