ಬಿ ಸಿ ರೋಡ್ ಕಾಲುದಾರಿಯಲ್ಲಿ ಕೇಬಲ್ ವಯರ್ ತುಂಬಿಕೊಂಡು ಪಾದಚಾರಿಗಳಿಗೆ ಅಪಾಯ ಭೀತಿ

ಕಾಸರಗೋಡು: ಎಷ್ಟೇ ಅನುಭವ ಉಂಟಾದರೂ ಅಧಿಕಾರಿ ವರ್ಗ ಕಲಿಯದು ಎಂಬುದಕ್ಕೆ ಪ್ರತ್ಯಕ್ಷ ಉದಾಹರಣೆಯಾಗಿದೆ ಕಾಲುದಾರಿಯಲ್ಲಿ ಬೇಕಾಬಿಟ್ಟಿ ತುಂಬಿಕೊಂಡಿರುವ ಕೇಬಲ್ ವಯರ್‌ಗಳು. ಇದು ಬೇರೆಲ್ಲೋ ಅಧಿಕಾರಿ ವರ್ಗಗಳ ಕಣ್ಣಿಗೆ ಕಾಣದ ಸ್ಥಳವಲ್ಲ. ವಿದ್ಯಾನಗರದಿಂದ ಬಿ ಸಿ ರೋಡ್‌ನತ್ತ ಸಾಗುವ ಸರ್ವೀಸ್ ರಸ್ತೆಯ ಬದಿಯ ಕಾಲುದಾರಿಯಲ್ಲಿ ಕೇಬಲ್ ವಯರ್ ಎಲ್ಲೆಂದರಲ್ಲಿ ಬಿದ್ದುಕೊಂಡು, ಜೋತಾಡಿಕೊಂಡು ಕಂಬಗಳಲ್ಲಿ ಸುತ್ತಿ ಇಟ್ಟ ಸ್ಥಿತಿಯಲ್ಲಿ ಕಂಡು ಬರುತ್ತಿದೆ. ಕಾಲುದಾರಿಯಲ್ಲಿ ವಾಹನಗಳನ್ನು ನಿಲುಗಡೆಗೊಳಿಸುವವರು ಹೆಚ್ಚುತ್ತಿದ್ದು, ಇದರ ಮಧ್ಯೆ ನುಸುಳಿ ತೆರಳುವ ವೇಳೆ ಕೇಬಲ್ ವಯರ್‌ಗಳು ಸಿಲುಕಿಕೊಳ್ಳುತ್ತಿದ್ದು, ಜನರಿಗೆ ನಡೆದು ಹೋಗಲೂ ಆಗದ ಸ್ಥಿತಿ ಉಂಟಾಗಿದೆ. ವಿದ್ಯಾನಗರದಿಂದ ಆರಂಭಿಸಿ ಬಿ ಸಿ ರೋಡ್ ಅಂಡರ್ ಪಾಸ್‌ವರೆಗೆ ಬಾರೀ ವಯರ್‌ಗಳು ಅಲ್ಲಲ್ಲಿ ಕಂಡು ಬರುತ್ತಿವೆ. ಇದು ಕೆಲವೊಮ್ಮೆ ನಡೆದು ಹೋಗುವಾಗ ಕುತ್ತಿಗೆಗೆ ಸಿಲುಕುವುದು, ಕಾಲಿಗೆ ಎಡವುದು ಆಗುತ್ತಿದೆ. ಅವಸರ ಅವಸರವಾಗಿ ತೆರಳುವ ಮಂದಿಗೆ ಇದು ಇನ್ನಷ್ಟು ಅಪಾಯ ತಂದೊಡ್ಡಲಿದೆ.

ವಿದ್ಯುತ್ ಸರ್ವೀಸ್ ವಯರ್ ಜೋತಾಡಿಕೊಂಡಿದ್ದ ಕಾರಣ ಇತ್ತೀಚೆಗೆ ಮಧೂರಿನಿಂದ ಆಗಮಿಸುತ್ತಿದ್ದ ಬೈಕ್ ಸವಾರರು ಅಪಘಾತಕ್ಕೀಡಾಗಿ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು. ಇವರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಈ ಘಟನೆ ನಡೆದು ಕೇಬಲ್ ವಯರ್‌ಗಳಿಂದ ಉಂಟಾಗಬಹುದಾದ ಅಪಾಯದ ಬಗ್ಗೆ ಅರಿವಿಗೆ ಬಂದರೂ, ಜನಸಾಮಾನ್ಯರು ನಡೆದಾಡುವ ಕಾಲುದಾರಿಯಲ್ಲಿ ಸಿಕ್ಕಾಬಟ್ಟೆ ತುಂಬಿಕೊಂಡ ಈ ಕೇಬಲ್ ವಯರ್‌ಗಳನ್ನು ಸೂಕ್ತ ರೀತಿಯಲ್ಲಿ ವ್ಯವಸ್ಥಿತವಾಗಿ ಜೋಡಿಸಿಡಲು ಕ್ರಮ ಉಂಟಾಗದಿರುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಅಧಿಕಾರಿವರ್ಗ ಸೂಕ್ತ ಕ್ರಮ ಶೀಘ್ರ ಕೈಗೊಳ್ಳಬೇಕೆಂದು ಪಾದಚಾರಿಗಳು ಆಗ್ರಹಿಸಿದ್ದಾರೆ.

You cannot copy contents of this page