ಕಾಸರಗೋಡು: ಪ್ರೇಮದಲ್ಲಿದ್ದಾಗ ತೆಗೆದ ಫೋಟೋಗಳನ್ನು ಸೋಶ್ಯಲ್ ಮೀಡಿಯಾಗಳಲ್ಲಿ ಪ್ರಚಾರಮಾಡಿ, ಬೇರೊಬ್ಬನನ್ನು ಮದುವೆಯಾಗಲು ಬಿಡಲಾರೆನೆಂದು ಬೆದರಿಕೆಯೊಡ್ಡು ತ್ತಿರುವುದಾಗಿ ನೀಡಿದ ದೂರಿನಂತೆ ಬೇಕಲ ಪೊಲೀಸರು ಇಬ್ಬರ ವಿರುದ್ಧ ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿಯಾದ 22ರ ಹರೆಯದ ಯುವತಿ ನೀಡಿದ ದೂರಿನಂತೆ ಚೆರ್ವತ್ತೂರು ಕಾಡಂಕೋಡ್‌ನ ಶೆರಿನ್ ಮೆರ್ಷಾದ್ (30), ಈತನ ತಂದೆ ಶಂಸುದ್ದೀನ್ ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ಒಂದು ಮದುವೆ ಕಾರ್ಯಕ್ರಮದಲ್ಲಿ ಫೋಟೋ ತೆಗೆಯುತ್ತಿದ್ದ ವೇಳೆ ದೂರುದಾತೆ ವಿದ್ಯಾರ್ಥಿನಿ ಹಾಗೂ ಮೆರ್ಶಾದ್ ಪರಿಚಯಗೊಂಡಿದ್ದರು. ಅನಂತರ ಅದು ಪ್ರೇಮಕ್ಕೆ ತಿರುಗಿತು. ಈ ಸಂದರ್ಭದಲ್ಲಿ ಅವರಿಬ್ಬರು ಜತೆಗೆ ನಿಂತು ತೆಗೆದ ಪೋಟೋಗಳನ್ನು ಮೆರ್ಶಾದ್ ಇನ್‌ಸ್ಟಾಗ್ರಾಂ ಪ್ರೊಫೈಲ್ ಪಿಕ್ಚರ್ ಆಗಿ ಉಪಯೋಗಿಸಿರುವುದಾಗಿ ಯುವತಿ ಆರೋಪಿಸಿದ್ದಾಳೆ. ಅಲ್ಲದೆ ದೂರುದಾತೆಯನ್ನು ಕಾರಿನಲ್ಲಿ ಹಿಂಬಾಲಿಸಿ ಉಪಟಳ ನೀಡಿದ ಮೆರ್ಶಾದ್ ಹಾಗೂ ಆತನ ತಂದೆ ಶಂಸುದ್ದೀನ್ ಪ್ರೇಮದಲ್ಲಿದ್ದಾಗ ತೆಗೆದ ಫೋಟೋಗಳನ್ನು ಸೋಶ್ಯಲ್ ಮೀಡಿಯಾಗಳ ಮೂಲಕ ಪ್ರಚಾರಮಾಡಿ ಬೇರೆಯವನನ್ನು ಮದುವೆಯಾಗಲು ಬಿಡಲಾರೆವೆಂದು ಬೆದರಿಕೆಯೊಡ್ಡಿರುವುದಾಗಿ ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.






