ದಿನನಿತ್ಯ ಹಲವಾರು ಲಾರಿಗಳಲ್ಲಿ ಕೆಂಪುಕಲ್ಲು ಸಾಗಾಟ: ರಸ್ತೆಯ ಸ್ಥಿತಿ ಶೋಚನೀಯವಾಗಿ ಸಂಚಾರ ಸಮಸ್ಯೆ

ಪೈವಳಿಕೆ: ಪಂಚಾಯತ್‌ನ ೧ನೇ ವಾರ್ಡ್ ವ್ಯಾಪ್ತಿಯ ಕುರುಡಪದವು-ಕೊಮ್ಮಂಗಳ ರಸ್ತೆಯಲ್ಲಿ ಸಂಚಾರವೇ ಅಸಾಧ್ಯ ವಾದ ಸ್ಥಿತಿಗೆ ತಲುಪಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಈ ರಸ್ತೆಯಗೆ ಕಳೆದ ಮಾರ್ಚ್‌ನಲ್ಲಿ ಡಾಮರೀಕರಣ ನಡೆಸಲಾಗಿತ್ತು. ಆದರೆ ಈ ರಸ್ತೆ ಮೂಲಕ ದಿನಂಪ್ರತಿ ಕೆಂಪುಕಲ್ಲು ಸಾಗಾಟದ ಲಾರಿಗಳು ಅವ್ಯಾಹತ ವಾಗಿ ಸಂಚರಿಸಿರುವುದು ರಸ್ತೆಯ ದುರಸ್ತಿಗೆ ಕಾರಣವೆಂದು ಸ್ಥಳೀಯರು ದೂರಿದ್ದಾರೆ. ರಸ್ತೆಯ ದುರಸ್ತಿಗೆ ಈಗ ಮತ್ತೆ ಹಣ ಮಂಜೂರಾಗಿದ್ದು, ಆದರೆ ಈ ಮೂಲಕ ಸಾಗುವ ಲಾರಿಗಳಿಗೆ  ನಿಯಂತ್ರಣ ಹೇರದಿದ್ದಲ್ಲಿ ದುರಸ್ತಿ ಬಳಿಕವೂ ರಸ್ತೆ ಇದೇ ಸ್ಥಿತಿಗೆ ತಲುಪಬಹುದೆಂದು ಸ್ಥಳೀಯರು ತಿಳಿಸಿದ್ದಾರೆ. ಕರ್ನಾಟಕ ಭಾಗಕ್ಕೆ ಹಗಲು-ರಾತ್ರಿ ನೂರಾರು ಲಾರಿಗಳು ಕೆಂಪುಕಲ್ಲು ಹೇರಿ ಕೊಂಡು ಸಂಚರಿಸುತ್ತಿರುವುದಾಗಿ ದೂರಲಾಗಿದೆ. ಈಗ ಈ ರಸ್ತೆ ಪೂರ್ತಿ ಹೊಂಡಗಳಿಂದ ತುಂಬಿದ್ದು, ವಾಹನಗಳು ಬಿಟ್ಟು ಮನುಷ್ಯರಿಗೇ ನಡೆಯಲಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.  ದುರಸ್ತಿಗೊಂಡ ಬಳಿಕವಾದರೂ ಕೆಂಪುಕಲ್ಲು ಸಾಗಾಟದ ಲಾರಿಗಳನ್ನು ನಿಯಂತ್ರಿಸಲು ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

You cannot copy contents of this page