ಕಾಸರಗೋಡು: ಚೀಮೇನಿಯಲ್ಲಿ ನಡೆದ ಕಳಿಯಾಟಂಗೆ ಕುಟುಂಬ ತೆರಳಿದ ಸಮಯದಲ್ಲಿ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವುಗೈದ ಪ್ರಕರಣದ ದ್ವಿತೀಯ ಆರೋಪಿಯನ್ನು ಬಸ್ ಪ್ರಯಾಣ ಮಧ್ಯೆ ಪೊಲೀಸರು ಸೆರೆ ಹಿಡಿದಿದ್ದಾರೆ. ತೈತಪ್ರಂ ಪಾಣತ್ತನಡಿಯ ಎ.ಪಿ. ಹರಿದಾಸ್ (42)ನನ್ನು ಚೀಮೇನಿ ಪೊಲೀಸರು ಅರಮಂಙತ್‌ನಲ್ಲಿ ಸೆರೆ ಹಿಡಿದಿದ್ದಾರೆ. ತಲೆಮರೆಸಿಕೊಂಡಿದ್ದ ಹರಿದಾಸ್ ಬಸ್‌ನಲ್ಲಿ ಪ್ರಯಾಣಿಸು ತ್ತಿದ್ದಾನೆಂಬ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ದಾವಿಸಿ ಸೆರೆ ಹಿಡಿದ್ದಾರೆ.
ಪ್ರಕರಣದ ಪ್ರಧಾನ ಆರೋಪಿಯಾದ ಕಾನಾಯಿ ತಂಬಾನ್ ಇತ್ತೀಚೆಗೆ ಸೆರೆಯಾಗಿದ್ದನು. ಚೀಮೇನಿ ಪೇಟೆಯ ಚೇತನ ರಸ್ತೆಯ ಪ್ಲಾಂಗು ಕುಂಞಂಬುರ ಮನೆಯಿಂದ ಕೆಲವು ದಿನಗಳ ಹಿಂದೆ ಕಳವು ನಡೆಸಲಾಗಿತ್ತು. ಮನೆ ಮಂದಿ ಚೀಮೇನಿ ಶ್ರೀ ವಿಷ್ಣುಮೂರ್ತಿ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವಕ್ಕೆಂದು ತೆರಳಿದ ಸಮಯದಲ್ಲಿ ಮನೆಯ ಹಿಂಬದಿಯ ಗ್ರಿಲ್ಸ್ ಮುರಿದು ಒಳಗೆ ನುಗ್ಗಿ 4 ಬಳೆಗಳು, 1 ಉಂಗುರ ಕಳವುಗೈದಿದ್ದರು. ಕಳವಿನ ಮಧ್ಯೆ ಓರ್ವ ಕಳ್ಳನಿಗೆ ಗಾಯವುಂಟಾಗಿತ್ತು. ಕೊಠಡಿಯೊಳಗೆ ಬಟ್ಟೆಗಳಲ್ಲಿ ರಕ್ತದ ಕಲೆಗಳು ಕಂಡು ಬಂದಿತ್ತು. ಇದರಿಂದ ಕಳ್ಳರಲ್ಲಿ ಓರ್ವನಿಗೆ ಗಾಯವುಂಟಾಗಿರುವ ಬಗ್ಗೆ ಸ್ಪಷ್ಟಗೊಂಡಿತ್ತು.






