ಕೋಟ್ಟಯಂ: ಕೇರಳದಲ್ಲಿ ಐಕ್ಯರಂಗಕ್ಕೆ ಲಭಿಸಿದ ಇತಿಹಾಸ ಜಯ ಕೆಲವರ ಸಾಧನೆಯಿಂದ ಲಭಿಸಿದುದಲ್ಲವೆಂದು ಎನ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ಜಿ. ಸುಕುಮಾರನ್ ನಾಯರ್ ನುಡಿದರು. ಪಿಣರಾಯಿ ವಿಜಯನ್‌ರ ಆಡಳಿತದಲ್ಲಿ ಜನರು ನಿರಾಶೆಹೊಂದಿ ಬದಲಾವಣೆಗೆ ಬೇಕಾಗಿ ಮತದಾನ ಮಾಡಿದ ಕಾರಣ ಇದು ಸಂಭವಿಸಿದೆ ಎಂದು ಅವರು ನುಡಿದರು. ಜನರಿಗೆ ಸರಕಾರದೊಂದಿಗಿರುವ ಪ್ರತಿಭಟನೆ ಐಕ್ಯರಂಗಕ್ಕೆ ಅನುಕೂಲಕರವಾಗಿ ಪ್ರತಿಫಲಿಸಿತು ಎಂದು ಅವರು ಎನ್‌ಎಸ್‌ಎಸ್ ಕೇಂದ್ರ ಕಚೇರಿ ಯಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು.
ಯುಡಿಎಫ್ ಯಾರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಿದರೂ ಎನ್‌ಎಸ್‌ಎಸ್‌ಗೆ ತೊಂದರೆಯಿಲ್ಲ ಎಂದು ಅವರು ನುಡಿದರು. ಅನುಭವ ಹಾಗೂ ಸಾಮರ್ಥ್ಯವಿರುವವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರೆ ಪಕ್ಷಕ್ಕೆ ಹಾಗೂ ಆಡಳಿತಕ್ಕೆ ಉತ್ತಮ. ಚುನಾವಣೆಯಲ್ಲಿ ಯಾರನ್ನಾದರೂ ಗೆಲ್ಲಿಸಬೇಕು, ಸೋಲಿಸಬೇಕೆಂದು ಎನ್‌ಎಸ್‌ಎಸ್ ಕರೆ ನೀಡಿರಲಿಲ್ಲ. ಅರ್ಹತೆ ಇಲ್ಲದ ಯಾವುದನ್ನೂ ಕೂಡಾ ಸರಕಾರದಿಂದ ಪಡೆದು ಕೊಳ್ಳಲು ಎನ್‌ಎಸ್‌ಎಸ್‌ಗೆ ಆಸಕ್ತಿ ಇಲ್ಲವೆಂದು ಅವರು ನುಡಿದರು.






