ಪೆರ್ಲ: ಸಂಚರಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರ ಬುಡ ಸಹಿತ ಮಗುಚಿ ಬಿದ್ದಿದ್ದು ಪ್ರಯಾಣಿಕ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಕಾರು ಪ್ರಯಾಣಿಕ ನಾದ ಪೆರ್ಲ ಬಳಿಯ ಬರೆಕೆರೆ ನಿವಾಸಿ ಡಾ| ವಿಷ್ಣು ಪ್ರಸಾದ್ ಎಂಬವರು ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾ ಗಿದ್ದಾರೆ. ಪೆರ್ಲ ಬಳಿಯ ಮಣಿಯಂ ಪಾರೆಯಲ್ಲಿ ನಿನ್ನೆ ಸಂಜೆ 6 ಗಂಟೆ ವೇಳೆ ಈ ದುರ್ಘಟನೆ ಸಂಭವಿಸಿದೆ. ಕಾರು ಪೂರ್ಣವಾಗಿ ಹಾನಿಗೀಡಾಗಿದೆ. ಇದೇ ವೇಳೆ ವಿದ್ಯುತ್ ಕಂಬ, ತಂತಿಗಳು ಹಾಗೂ ಮರ ರಸ್ತೆ ಮೇಲೆ ಅಪ್ಪಳಿಸಿದೆ. ಸೀತಾಂಗೋಳಿಯಲ್ಲಿ ಕ್ಲಿನಿಕ್ ನಡೆಸುವ ಡಾ| ವಿಷ್ಣು ಪ್ರಸಾದ್ ನಿನ್ನೆ ಸಂಜೆ ಮನೆಗೆ ತೆರಳುತ್ತಿದ್ದರು. ಇದೇ ಸಂದರ್ಭದಲ್ಲಿ ರಸ್ತೆ ಬದಿಯ ಮರ ಅವರ ಕಾರಿನ ಮೇಲೆ ಬಿದ್ದಿದೆ. ನಾಗರಿಕರು ತಕ್ಷಣ ನಡೆಸಿದ ಕಾರ್ಯಾಚರಣೆಯಿಂದ ಕಾರಿನಲ್ಲಿ ಸಿಲುಕಿದ್ದ ವೈದ್ಯರನ್ನು ಹೊರಕ್ಕೆ ತೆಗೆಯಲಾಯಿತು. ದುರ್ಘಟನೆ ಯಿಂದಾಗಿ ಈ ಪರಿಸರದಲ್ಲಿ ವಿದ್ಯುತ್ ವಿತರಣೆ ಮೊಟಕುಗೊಂಡಿತು.






