ಮಧೂರು/ಅಡೂರು: ಅಡೂರು ಹಾಗೂ ಮಧೂರಿನಲ್ಲಿ ಮೊನ್ನೆ ಸಂಭವಿಸಿದ ಭೀಕರ ದುರ್ಘಟನೆಯಲ್ಲಿ ಒಟ್ಟು ಮೂವರು ಮಕ್ಕಳು ಸಾವಿಗೀಡಾಗಿರುವುದು ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ.
ದೇಲಂಪಾಡಿ ಪಂಚಾಯತ್‌ನ ಅಡೂರು ಸಂಜೆಕಡವು ಪೆಲಮರ್ವ ಎಂಬಲ್ಲಿ ಮೊನ್ನೆ ಸಂಜೆ ಸಂಭವಿಸಿದ ದುರ್ಘಟನೆಯಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಪೆಲಮರ್ವದ ಅಬೂಬಕರ್‌ರ ಮಕ್ಕಳಾದ ಪಿ. ಮುಸಮ್ಮಿಲ್ (14), ಪಿ.ಮುಹಮ್ಮದ್ ಮುನ್ಸೀರ್ (10) ಎಂಬಿವರು ಮೃತಪಟ್ಟ ದುರ್ದೈವಿಗಳಾ ಗಿದ್ದಾರೆ. ಇವರ ಜತೆಗಿದ್ದ ಮುಹಮ್ಮದ್ ವಾಹಿಶ್ (14) ಗಂಭೀರ ಗಾಯಗೊಂಡಿದ್ದು, ಈತನನ್ನು ಚೆಂಗಳ ಇಂದಿರಾನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ತಾತ್ಕಾಲಿಕವಾಗಿ ನಿರ್ಮಿಸಿದ ಅಂಗಡಿಯಲ್ಲಿ ಈ ಮಕ್ಕಳು ಮಿಠಾಯಿ ಮಾರಾಟ ಮಾಡುತ್ತಿದ್ದರು. ಈ ವೇಳೆ ಎರಡು ತಿಂಗಳ ಹಿಂದೆಯಷ್ಟೇ ಗೃಹಪ್ರವೇಶ ನಡೆದ ಮನೆಯ ಸಮೀಪದ ಗೋಡೆ ಕುಸಿದು ತಾತ್ಕಾಲಿಕ ಅಂಗಡಿಯ ಮೇಲೆ ಬಿದ್ದಿದೆ. ವಿಷಯ ತಿಳಿದು ತಲುಪಿದ ನಾಗರಿಕರ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿ ಮಕ್ಕಳನ್ನು ಮಣ್ಣಿನಡಿಯಿಂದ ಮೇಲಕ್ಕೆತ್ತಲಾಗಿತ್ತು. ಕೂಡಲೇ ಮಕ್ಕಳನ್ನು ಮುಳ್ಳೇರಿಯದ ಆಸ್ಪತ್ರೆಗೆ ತಲುಪಿಸಿದರೂ ಇಬ್ಬರ ಜೀವ ರಕ್ಷಿಸಲಾಗಲಿಲ್ಲ. ಬಳಿಕ ಮೃತದೇಹ ವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು.
ಮೃತ ಮಕ್ಕಳು ತಂದೆ, ತಾಯಿ ಸೌದ, ಸಹೋದರರಾದ ಮುಮ್ತಸೀರ್, ಮುಬಶೀರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಘಟನೆಗೆ ಸಂಬಂಧಿಸಿ ಆದೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಇನ್ನೊಂದು ದುರ್ಘಟನೆ ಮಧೂರು ಮಂಜತ್ತಡ್ಕದಲ್ಲಿ ಸಂಭವಿಸಿದೆ. ಇಲ್ಲಿನ ಅಹಮ್ಮದ್ ಸಾಜಿದ್‌ರ ಪುತ್ರ ಮುಹಮ್ಮದ್ ಅಯಾನ್ ಸಾಸಿಂ (6) ಮೃತಪಟ್ಟ ದುರ್ದೈವಿಯಾಗಿದ್ದಾನೆ. ಸೆಫ್ಟಿಕ್ ಟ್ಯಾಂಕ್ ನಿರ್ಮಿಸಲು ತೋಡಿದ ಹೊಂಡದಲ್ಲಿ ಬಿದ್ದು ಈ ದುರ್ಘಟನೆ ಸಂಭವಿಸಿದೆ. ಮೊನ್ನೆ ಸಂಜೆ ಬಾಲಕ ನಾಪತ್ತೆಯಾಗಿದ್ದನು. ಇದರಿಂದ ಹುಡುಕಾಟ ನಡೆಸಿದಾಗ ಮನೆಯಿಂದ 100 ಮೀಟರ್ ದೂರದಲ್ಲಿ ನಿರ್ಮಾಣ ಹಂತದ ಮನೆಯ ಸಮೀಪ ಬಾಲಕನ ಚಪ್ಪಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿ ನಡೆಸಿದ ಶೋಧ ವೇಳೆ ಬಾಲಕ ಸೆಫ್ಟಿಕ್ ಟ್ಯಾಂಕ್‌ನ ಹೊಂಡದ ನೀರಿನಲ್ಲಿ ಬಿದ್ದಿದ್ದನು. ಕೂಡಲೇ ಮೇಲಕ್ಕೆತ್ತಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಬಳಿಕ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು ಘಟನೆಗೆ ಸಂಬಂಧಿಸಿ ಕಾಸರಗೋಡು ನಗರಠಾಣೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತ ಬಾಲಕ ತಂದೆ, ತಾಯಿ ಆಸ್ಯುಮ್ಮ, ಸಹೋದರ ಯಾಸಿಂ ಸಾಹಿದ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.





