ಎಡನೀರು: ಶ್ರೀಶಂಕರ ಭಗವತ್ಪಾದರ ತತ್ವಗಳ ಪಾಲನೆ ಆತ್ಮೋದ್ಧಾರದೊಂದಿಗೆ ಸಕಲ ಸಂಕಷ್ಟಗಳಿಗೆ ಪರಿಹಾರ ನೀಡುತ್ತದೆ ಎಂದು ಶೃಂಗೇರಿ ದಕ್ಷಿಣಾಮ್ನಾಯ ಶ್ರೀ ಶಾರದಾಪೀಠದ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ನುಡಿದರು. ಎಡನೀರು ಮಠದಲ್ಲಿ ನೂತನವಾಗಿ ನಿರ್ಮಿಸಿದ ಶಿಲಾಮಯ ಮಂಟಪದಲ್ಲಿ ಜಗದ್ಗುರು ಶ್ರೀ ಶಂಕರ ಭಗವತ್ಪಾದಾಚಾರ್ಯರ ಪಂಚಲೋಹದ ಪ್ರತಿಮೆಯ ಪ್ರತಿಷ್ಠಾಪನೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು. ನಮಗೆ ಭಾರತದೊಳಗೆ ಸನಾತನ ಧರ್ಮದ ಐಕ್ಯಮತ್ಯವೇ ಪ್ರಧಾನ. ಆಚಾರಾನುಷ್ಠಾನಗಳ ಹೆಸರಲ್ಲಿ ಉತ್ತರಭಾರತ- ದಕ್ಷಿಣ ಭಾರತ ಎಂಬ ವಿಭಜನೆ ಸಲ್ಲದು ಎಂದರು. ದೇಶದ ಚತುರಾಮ್ನಾಯ ಪೀಠ ಸ್ಥಾಪನೆ ಮೂಲಕ ಆಚಾರ್ಯ ಶಂಕರರು ನೀಡಿದ ಸಂದೇಶವನ್ನು ನಾವು ಪಾಲಿಸಬೇಕು ಎಂದು ಸ್ವಾಮೀಜಿ ನುಡಿದರು. ಇದೇ ವೇಳೆ ಶ್ರೀಮಠದ ಆನಂದಭಾರತೀ ಪ್ರಕಾಶನದ ಲಾಂಛನವನ್ನು ಸ್ವಾಮೀಜಿ ಬಿಡುಗಡೆಗೊಳಿಸಿದರು.
ಭತ್ತದ ತಳಿಗಳ ಸಂಗ್ರಹ ಹಾಗೂ ಸಂಶೋಧನೆಗಾಗಿ ಪದ್ಮಶ್ರೀ ಪಡೆದ ಸತ್ಯನಾರಾಯಣ ಬೆಳೇರಿ ಅವರ ಮುಂದಿನ ಸಂಶೋಧನೆಗೆ ನೆರವಾಗುವ ನಿಟ್ಟಿನಲ್ಲಿ ಸ್ಥಾಪಿಸಲ್ಪಟ್ಟ ಅತಿಕಾರ ಟ್ರಸ್ಟ್‌ನ ಲಾಂಛನ ಬಿಡುಗಡೆಗೊಳಿಸಿ ಸತ್ಯನಾರಾಯಣ ಬೆಳೇರಿ ಅವರನ್ನು ಸ್ವಾಮೀಜಿ ಗೌರವಿಸಿದರು. ಪ್ರತಿಮೆ ಸ್ಥಾಪನೆಗೆ ಕೊಡುಗೆ ನೀಡಿದ ರಾಜೀವ ಅಗಸ್ತ್ಯರನ್ನು ಗೌರವಿಸಲಾಯಿತು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರ ಇಚ್ಛೆ ಇಂದು ನೆರವೇರಿದೆ ಎಂದರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಕೆ. ನೀಲಕಂಠನ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
ಬಳ್ಳಪದವು ಯೋಗೀಶ್ ಶರ್ಮರಿಂದ ಸಂಗೀತ ಪ್ರಾರ್ಥನೆ ನಡೆಯಿತು. ಹಿರಣ್ಯ ವೆಂಕಟೇಶ್ವರ ಭಟ್ ಪ್ರಸ್ತಾಪಿಸಿದರು. ಡಾ. ಟಿ. ಶ್ಯಾಮ್ ಭಟ್ ಸ್ವಾಗತಿಸಿದರು. ಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ, ಉದ್ಯಮಿ ಬಲರಾಮ ಆಚಾರ್ಯ ಪುತ್ತೂರು ಮಾತನಾಡಿದರು. ಕಾರ್ಯಕ್ರಮದಂಗವಾಗಿ ರುದ್ರಹವನ, ದಕ್ಷಿಣಾಮೂರ್ತಿ ಹವನ, ಶ್ರೀ ಗೋಪಾಲಕೃಷ್ಣ ಹವನ ನಡೆಯಿತು.






