ಫಲಿತಾಂಶ ಬಂದು ಒಂದು ವಾರವಾದರೂ ಮುಖ್ಯಮಂತ್ರಿ ಆಯ್ಕೆ ಇನ್ನೂ ಕಗ್ಗಂಟು

ತಿರುವನಂತಪುರ: ಕೇರಳ ವಿಧಾನ ಸಭೆಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡು ಇಂದಿಗೆ ಒಂದು ವಾರವಾದರೂ ನೂತನ ಮುಖ್ಯಮಂತ್ರಿ ಯಾರು ಎಂಬುದು  ಪ್ರಶ್ನೆಯಾಗಿಯೇ ಮುಂದುವರಿ ಯುತ್ತಿದೆ. ಚುನಾವಣೆಯಲ್ಲಿ ಯುಡಿಎಫ್‌ಗೆ 102 ಸ್ಥಾನಗಳೊಂದಿಗೆ ಪ್ರಚಂಡ ಬಹುಮತ ಲಭಿಸಿದ್ದರೂ ನೂತನ ಮುಖ್ಯಮಂತ್ರಿಯನ್ನು ನಿರ್ಧರಿಸುವಲ್ಲಿ ಸಂದಿಗ್ಧತೆ ಮುಂದುವರಿಯುತ್ತಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ವಿ.ಡಿ. ಸತೀಶನ್, ರಮೇಶ್ ಚೆನ್ನಿತ್ತಲ ಹಾಗೂ ಕೆ.ಸಿ. ವೇಣುಗೋಪಾಲ್ ಎಂಬಿವರ ಮಧ್ಯೆ   ಪೈಪೋಟಿ ಮುಂದುವರಿಯುತ್ತಿದೆ. ಇದೇ ವೇಳೆ ಈ ಮೂವರು ನೇತಾರರನ್ನು ದಿಲ್ಲಿಗೆ ಕರೆಸಿ ಕಾಂಗ್ರೆಸ್ ಹೈಕಮಾಂಡ್ ಈಗಾಗಲೇ ಪ್ರತ್ಯೇಕ ಪ್ರತ್ಯೇಕವಾಗಿ  ಚರ್ಚೆ ನಡೆಸಿ ಅವರ ಅಭಿಪ್ರಾಯಗಳನ್ನು ಅಲಿಸಿದೆ. ಆದರೆ  ತಮ್ಮ ನಿಲುವಿನಿಂದ ಹಿಂದಕ್ಕೆ ಸರಿಯಲು ಈ ಮೂವರು ನೇತಾರರು ತಯಾರಾಗಿಲ್ಲ. ಇದರಿಂದಾಗಿ ಮುಖ್ಯಮಂತ್ರಿ ಆಯ್ಕೆ ಜಟಿಲ ಸಮಸ್ಯೆಯಾಗಿ ಮುಂದುವರಿಯುತ್ತಿದೆ.

 ಇದೇ ಸಂದರ್ಭದಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒಂದು ಹೊಸ ಪರಿಹಾರ ಸೂತ್ರ ಮುಂದಿರಿಸಿದ್ದಾರೆ. ಇದರಂತೆ ಪಕ್ಷದಲ್ಲಿ ಹಿರಿತನಕ್ಕೆ ಹೊಂದಿಕೊಂಡು ಮೊದಲ ಎರಡೂವರೆ ವರ್ಷ ರಮೇಶ್ ಚೆನ್ನಿತ್ತಲ ಮತ್ತು ನಂತರದ ಎರಡೂವರೆ ವರ್ಷ ವಿ.ಡಿ. ಸತೀಶನ್ ಮುಖ್ಯಮಂತ್ರಿ ಸ್ಥಾನ ಹಂಚಿಕೆ ಮಾಡಿಕೊಳ್ಳಬೇಕೆಂದು ಹೇಳುವ ಮೂಲಕ ಸಮಸ್ಯೆಗೆ ಪರಿಹಾರ ಸೂಚಿಸಿದ್ದಾರೆ.

ಆದರೆ ಕಾಂಗ್ರೆಸ್  ಶಾಸಕರಲ್ಲಿ ಬಹುಪಾಲು ಮಂದಿ ಕಾಂಗ್ರೆಸ್ ಕೇಂದ್ರ ಪ್ರಧಾನ ಕಾರ್ಯದರ್ಶಿ  ಕೆ.ಸಿ. ವೇಣು ಗೋಪಾಲ್‌ರನ್ನು ಬೆಂಬಲಿಸುವುದರಿಂದ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಹೊರತುಪಡಿಸುವುದು ಸರಿಯಲ್ಲವೆಂದು ಹೇಳುವ ಮೂಲಕ ವೇಣುಗೋಪಾಲ್ ಪರ ಗಾಳ ಬೀಸಿದ್ದಾರೆ. ರಮೇಶ್ ಚೆನ್ನಿತ್ತಲ್ಲ  ಮತ್ತು ವಿ.ಡಿ. ಸತೀಶನ್‌ರನ್ನು  ಹೊರತುಪಡಿಸಿ ವೇಣುಗೋಪಾಲ್‌ರಿಗೆ ಮಣೆ ಹಾಕಿದಲ್ಲಿ ಅದರಿಂದ  ಪಕ್ಷದ ಕೇರಳ ಘಟಕದಲ್ಲಿ ಭಾರೀ ಪ್ರತಿಭಟನೆ ಸೃಷಿಯಾಗುವ ಸಾಧ್ಯತೆ ಇದೆಯೆಂಬ ಆತಂಕ  ಹೈಕಮಾಂಡ್‌ನ್ನು ಕಾಡತೊಡಗಿದೆ. ಆದ್ದರಿಂದ ಮುಖ್ಯಮಂತ್ರಿ ಆಯ್ಕೆ ಅಂತಿಮ ತೀರ್ಮಾನ ಈಗ ಹೈಕಮಾಂಡ್‌ನದ್ದಾಗಿದೆ. ಹೈಕಮಾಂಡ್ ನ  ತೀರ್ಮಾನ ನಾಳೆ ಅಥವಾ ನಾಡಿದ್ದು ಉಂಟಾಗುವ ಸಾಧ್ಯತೆ ಇದ.  ಮುಖ್ಯಮಂತ್ರಿಯ ಆಯ್ಕೆ ವಿಳಂಬಗೊಳ್ಳುತ್ತಿರುವುರಿಂದ ಯುಡಿಎಫ್ ಘಟಕ ಪಕ್ಷವಾದ ಮುಸ್ಲಿಂ ಲೀಗ್ ತೀವ್ರ ಅಸಂತೃಪ್ತಿ ವ್ಯಕ್ತಪಡಿಸಿದೆ. ಮಾತ್ರವಲ್ಲ ಈ ವಿಷಯದಲ್ಲಿ ಅಂತಿಮ ತೀರ್ಮಾನ ಉಂಟಾಗದೇ ಇರುವುದು ಕೇರಳದ ಜನರಲ್ಲಿ ಅಸಮಾಧಾನ ಸೃಷ್ಟಿಸತೊ ಡಗಿದೆ. ಆದ್ದರಿಂದ ಶೀಘ್ರ ತೀರ್ಮಾನ ಉಂಟಾಗಬೇಕಾಗಿದೆ ಯೆಂದು ಕಾಂಗ್ರೆಸ್‌ನ   ಹಿರಿಯ ನಾಯಕ ರಲ್ಲೋರ್ವ ಕೆ.ಮುರಳೀಧರನ್ ಕೂಡಾ ಸಲಹೆ ನೀಡಿದ್ದಾರೆ.

You cannot copy contents of this page