ಅಮಾನತಿಗೆ ತಡೆಯಾಜ್ಞೆ ಇಲ್ಲ: ರಿಜಿಸ್ಟ್ರಾರ್‌ಗೆ ಹಿನ್ನಡೆ; ಭಾರತಾಂಬೆಯನ್ನು ಧ್ವಜ ಹಿಡಿದ ಸ್ತ್ರೀ ಎಂಬ  ರೀತಿಯ ವಿಶ್ಲೇಷಣೆ ದೌರ್ಭಾಗ್ಯಕರ- ಹೈಕೋರ್ಟ್

ಕೊಚ್ಚಿ: ಕೇರಳ ವಿಶ್ವ ವಿದ್ಯಾಲಯದ ರಿಜಿಸ್ಟ್ರಾರ್ ಡಾ. ಕೆ.ಎಸ್. ಅನಿಲ್ ಕುಮಾರ್‌ರನ್ನು ಆ ಸ್ಥಾನದಿಂದ ಅಮಾನತುಗೊಳಿಸಿ ಪ್ರಸ್ತುತ ವಿ.ವಿಯ ಉಪ ಕುಲಪತಿ ಡಾ. ಮೋಹನನ್ ಕುನ್ನುಮ್ಮಲ್ ಕೈಗೊಂಡ ಕ್ರಮಕ್ಕೆ ತಡೆಯಾಜ್ಞೆ ನೀಡಲು ನ್ಯಾಯಮೂರ್ತಿ ಎನ್. ನಗರೇಶ್ ಒಳಗೊಂಡ ಹೈಕೋರ್ಟ್‌ನ ಏಕ ಸದಸ್ಯ ಪೀಠ ನಿರಾಕರಿಸಿದೆ. ತನ್ನನ್ನು ಅಮಾನತುಗೊಳಿಸಿದ ಉಪ ಕುಲಪತಿಯವರ ಕ್ರಮಕ್ಕೆ ತಡೆಯಾಜ್ಞೆ ನೀಡಬೇಕೆಂದು ಕೋರಿ    ಡಾ. ಕೆ.ಎಸ್. ಅನಿಲ್ ಕುಮಾರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆ ಬೇಡಿಕೆಯನ್ನು ಹೈಕೋರ್ಟ್ ಸದ್ಯ ಅಂಗೀಕರಿಸಿಲ್ಲ. ವಿಶ್ವ ವಿದ್ಯಾಲಯದ ಕಾಯ್ದೆಗಳ ಪ್ರಕಾರ  ರಿಜಿಸ್ಟ್ರಾರ್‌ರನ್ನು ಅಮಾನತುಗೊಳಿಸುವ ಅಧಿಕಾರವನ್ನು ಉಪಕುಲಪತಿ ಹೊಂದಿಲ್ಲವೆಂಬ ವಾದವನ್ನು ನ್ಯಾಯಾಲಯ ಅಂಗೀಕರಿಸಿಲ್ಲ. ಅಮಾನತುಗೊಳಿಸುವ ಅಧಿಕಾರ ಉಪಕುಲಪತಿಗಿದೆ. ಆದರೆ ಅದನ್ನು ಮೊದಲು ಅಂಗೀಕಾರಕ್ಕಾಗಿ ವಿ.ವಿ.ಯ ಸಿಂಡಿಕೇ ಟ್‌ಗೆ ಸಲ್ಲಿಸಬೇಕಾಗಿದೆ ಎಂದು  ನ್ಯಾಯಾಲಯ ಹೇಳಿದೆ.

ತುರ್ತು ಪರಿಸ್ಥಿತಿಯ ೫೦ನೇ ವಾರ್ಷಿಕದ ಅಂಗವಾಗಿ ಕೇರಳ ವಿ.ವಿಯ ಸೆನೆಟ್ ಹಾಲ್‌ನಲ್ಲಿ ಜೂನ್ ೨೫ರಂದು ಶ್ರೀ ಪದ್ಮನಾಭ ಸೇವಾ ಸಮಿತಿ ಹಮ್ಮಿಕೊಂಡ ಕಾರ್ಯಕ್ರಮದ ವೇದಿಕೆಯಲ್ಲಿ ಭಾರತಾಂಬೆಯ ಚಿತ್ರ ಇರಿಸಲಾಗಿತ್ತು. ಅದು ವಿ.ವಿಯ ಕಾಯ್ದೆಗಳ ಉಲ್ಲಂಘನೆಯಾಗಿದೆ ಎಂಬ ಕಾರಣ ನೀಡಿ   ಕಾರ್ಯಕ್ರಮಕ್ಕೆ   ನೀಡಲಾಗಿದ್ದ ಅನುಮತಿಯನ್ನು ರಿಜಿಸ್ಟ್ರಾರ್ ರದ್ದುಪಡಿಸಿದ್ದರು.   ಕಾರ್ಯಕ್ರಮದಲ್ಲಿ ರಾಜ್ಯಪಾಲರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅವರು ವೇದಿಕೆಯಲ್ಲಿ ಇರುವ ವೇಳೆಯಲ್ಲೇ   ಕಾರ್ಯಕ್ರಮಕ್ಕೆ ಅನುಮತಿಯನ್ನು ರಿಜಿಸ್ಟ್ರಾರ್ ರದ್ದುಪಡಿಸಿದ್ದರು. ಮಾತ್ರವಲ್ಲ ಆ ಬಗ್ಗೆ ಪೊಲೀಸರಿಗೂ ದೂರು ನೀಡಿದ್ದು, ಅದರಂತೆ ಪೊಲೀಸರು   ಕೇಸು ದಾಖಲಿಸಿಕೊಂಡಿದ್ದರು. ಅದರ ಹೆಸರಲ್ಲಿ ರಿಜಿಸ್ಟ್ರಾರ್‌ರನ್ನು ಉಪಕುಲಪತಿ  ಸೇವೆಯಿಂದ ಅಮಾನತುಗೊಳಿಸಿದ್ದರು. ಆ ಕ್ರಮವನ್ನು ಪ್ರಶ್ನಿಸಿ ರಿಜಿಸ್ಟ್ರಾರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಭಾರತಾಂಬೆಯ ಚಿತ್ರ ಧಾರ್ಮಿಕ ಚಿಹ್ನೆಯಾಗುವುದಾದರೂ ಹೇಗೆ ಎಂದು  ಹೈಕೋರ್ಟ್ ಪ್ರಶ್ನಿಸಿದ್ದು, ಭಾರತಾಂಬೆಯ ಕೈಯಲ್ಲಿ ಧ್ವಜ ಹಿಡಿದ ಓರ್ವ ಸ್ತ್ರೀ ಎಂಬ ರೀತಿಯಲ್ಲಿ ವಿಶ್ಲೇಷಣೆ ನೀಡಿದ್ದು ನಿಜಕ್ಕೂ ದೌರ್ಭಾಗ್ಯಕರವೆಂದೂ  ನ್ಯಾಯಾಲಯ ಹೇಳಿದೆ. ಮಾತ್ರವಲ್ಲ ಈ ಅರ್ಜಿ ಮೇಲಿನ ಮುಂದಿನ ಹಂತದ ಪರಿಶೀಲನೆಯನ್ನು ಹೈಕೋರ್ಟ್ ಸೋಮವಾರಕ್ಕೆ ಮುಂದೂಡಿದೆ.

Leave a Reply

Your email address will not be published. Required fields are marked *

You cannot copy content of this page