ಉಪ್ಪಳ: ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಬಾಯಾರು ಬಳಿಯ ಬಳ್ಳೂರು ಹೊಳೆಯಲ್ಲಿ ಪತ್ತೆಯಾಗಿದೆ.
ವಿಟ್ಲ ಅಳಿಕೆ ಸಮೀಪದ ಕೇಕಣಾಜೆ ಎಂಬಲ್ಲಿನ ರಾಮಚಂದ್ರ ಭಟ್ (62) ಎಂಬವರು ಮೃತಪಟ್ಟ ವ್ಯಕ್ತಿಯೆಂದು ಗುರುತಿಸಲಾಗಿದೆ. ನಿನ್ನೆ ಮಧ್ಯಾಹ್ನ ಬಳ್ಳೂರು ಹೊಳೆಯ ವಾಟೆಪಡ್ಪು ಎಂಬಲ್ಲಿನ ಸೇತುವೆ ಬದಿ ಮೃತದೇಹ ಸಿಲುಕಿಕೊಂಡಿತ್ತು. ಅದನ್ನು ಕಂಡ ಸ್ಥಳೀಯರು ಮೇಲಕ್ಕೆತ್ತಿದ್ದರು. ವಿಷಯ ತಿಳಿದು ಮಂಜೇಶ್ವರ ಪೊಲೀಸರು, ಅಗ್ನಿಶಾಮಕದಳ ಕೂಡಾ ಸ್ಥಳಕ್ಕೆ ತಲುಪಿದ್ದರು. ಮೃತದೇಹವನ್ನು ಮಂಗಲ್ಪಾಡಿ ತಾಲೂಕು ಸರಕಾರಿ ಆಸ್ಪತ್ರೆಗೆ ತಲುಪಿಸಿದ್ದು, ಸಂಬಂಧಿಕರು ತಲುಪಿ ಗುರುತು ಹಚ್ಚಿದ್ದಾರೆ. ಕಳೆದ ಸೋಮವಾರ ಸಂಜೆ ವಿಟ್ಲ ಪೇಟೆಗೆಂದು ತಿಳಿಸಿ ರಾಮಚಂದ್ರ ಭಟ್ ಮನೆಯಿಂದ ತೆರಳಿದ್ದ ರೆನ್ನಲಾಗಿದೆ. ಅನಂತರ ಅವರು ಮನೆಗೆ ಮರಳಿ ಬಾರದ ಹಿನ್ನೆಲೆಯಲ್ಲಿ ಮನೆಯವರು ವಿಟ್ಲ ಪೊಲೀಸರಿಗೆ ದೂರು ನೀಡಿದ್ದರು.
ಅವರಿಗಾಗಿ ಶೋಧ ನಡೆಯುತ್ತಿದ್ದಂತೆ ನಿನ್ನೆ ಮಧ್ಯಾಹ್ನ ಮೃತದೇಹ ಪತ್ತೆಯಾಗಿದೆ. ತೋಡಿನ ಬದಿಯಲ್ಲಿ ನಡೆದು ಹೋಗುತ್ತಿದ್ದಾಗ ಆಯ ತಪ್ಪಿ ತೋಡಿಗೆ ಬಿದ್ದು ಸಾವನ್ನಪ್ಪಿರಬ ಹುದೆಂದು ಅಂದಾಜಿಲಾಗಿದೆ. ಮೃತರು ಪತ್ನಿ ಸಾವಿತ್ರಿ, ಪುತ್ರ ಮಹೇಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






