ಕಣಿಪುರ ಜಾತ್ರೆಗೆ ಸಂಭ್ರಮದ ಚಾಲನೆ
ಕುಂಬಳೆ: ಪ್ರಸಿದ್ಧ ಕಣಿಪುರ ಶ್ರೀ ಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ಐದು ದಿನಗಳ ಕಾಲ ನಡೆಯುವ ವರ್ಷಾವಧಿ ಜಾತ್ರಾಮಹೋತ್ಸವಕ್ಕೆ ನಿನ್ನೆ ಧ್ವಜಾರೋಹಣ ನಡೆಯುವುದ ರೊಂದಿಗೆ ಸಂಭ್ರಮದ ಚಾಲನೆ ದೊರೆತಿದೆ. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಭಾರೀ ಸಂಖ್ಯೆಯ ಭಕ್ತರು ಈ ವೇಳೆ ಶ್ರೀ ದೇವರ ದರ್ಶನ ಪಡೆದರು. ವೇದಮೂರ್ತಿ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳವರ ಕಾರ್ಮಿಕತ್ವದಲ್ಲಿ ಈ ತಿಂಗಳ 18ರವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯ ಕ್ರಮಗಳೊಂದಿಗೆ ನಡೆಯುವ ಜಾತ್ರಾಮಹೋತ್ಸವದ ಅಂಗವಾಗಿ ಇಂದು ಬೆಳಿಗ್ಗೆ ಉತ್ಸವ ಶ್ರೀಬಲಿ, ತುಲಾಭಾರ ಸೇವೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ನಿತ್ಯ ಬಲಿ, ಅನ್ನ ಸಂತರ್ಪಣೆ, ಸಂಜೆ ರಾಗಮಾಲಿಕಾ ನೆಲ್ಲಿಕಟ್ಟೆ ಅವರಿಂದ ಭಕ್ತಿ ರಸಮಂಜರಿ, 6.30ಕ್ಕೆ ದೀಪಾರಾಧನೆ, ರಾತ್ರಿ 7.30ರಿಂದ ಪೂಜೆ, ಸಣ್ಣ ದೀಪೋತ್ಸವ, ಶ್ರೀ ಭೂತಬಲಿ ನಡೆಯಲಿದೆ. ನಾಳೆ ಬೆಳಿಗ್ಗೆ ೬ರಿಂದ ಉತ್ಸವ ಬಲಿ, 10.30ರಿಂದ ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ಶ್ರೀಬಲಿ, ಅನ್ನ ಸಂತರ್ಪಣೆ, ಸಂಜೆ 6.30ಕ್ಕೆ ವಿಶ್ವರೂಪ ದರ್ಶನ, ಶ್ರೀ ವಿನಾಯಕ ಹೆಗಡೆ ಮತ್ತು ಬಳಗದಿಂದ ಹಿಂದೂಸ್ತಾನಿ ಸಂತವಾಣಿ, ದಾಸವಾಣಿ, ರಾತ್ರಿ ೯ರಿಂದ ಪೂಜೆ ನಡುದೀಪೋತ್ಸವ, ಶ್ರೀಬಲಿ ನಡೆಯಲಿರುವುದು. 17ರಂದು ರಾತ್ರಿ 9.45ರಿಂದ ವಿಶೇಷ ಬೆಡಿ ಪ್ರದರ್ಶನ, ೧೮ರಂದು ರಾತ್ರಿ 7.30ಕ್ಕೆ ಧ್ವಜಾವರೋಹಣ ನಡೆಯಲಿದೆ.