ಕುಂಬಳೆ ಬಸ್ ನಿಲ್ದಾಣ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣ ಅನಿಶ್ಚಿತತೆಯಲ್ಲಿ: ಶೌಚಾಲಯಕ್ಕಾಗಿ ತುರ್ತು ಬೇಡಿಕೆ
ಕುಂಬಳೆ: ಕುಂಬಳೆ ಪೇಟೆಯಲ್ಲಿ ಬಸ್ ನಿಲ್ದಾಣ ಶಾಪಿಂಗ್ ಕಾಂಪ್ಲೆಕ್ಸ್ ಎಂಬ ಪಂಚಾಯತ್‌ನ ಕನಸು ಯೋಜನೆಗೆ ವಿವಿಧ ಕಾರಣಗಳು ತಿರುಗೇಟಾಗುತ್ತಿವೆ. ಒಂದು ಕಡೆ ಕೆಎಸ್‌ಟಿಪಿ ರಸ್ತೆ ನಿರ್ಮಾಣ, ಮತ್ತೊಂದು ಕಡೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸೇರಿದಾಗ ಬಸ್ ನಿಲ್ದಾಣ ನಿರ್ಮಿಸಲು ಸಮಸ್ಯೆ ಕಂಡು ಬಂದಿದೆ. ಜೊತೆಗೆ ಸ್ಥಳವೂ ಲಭ್ಯವಿಲ್ಲದ ಕಾರಣ ನಿರ್ಮಾಣಕ್ಕೆ ತೊಡಕಾಗಿದೆ. ಈ ಹಿನ್ನೆಲೆಯಲ್ಲಿ ಬಸ್ ನಿಲ್ದಾಣವನ್ನು ಇನ್ನೊಂದು ಸ್ಥಳಕ್ಕೆ ಸ್ಥಳಾಂತರಿಸುವ ಕ್ರಮಗಳೂ ಇದುವರೆಗೆ ಉಂಟಾಗಿಲ್ಲ. ಈ ಮಧ್ಯೆ ಕುಂಬಳೆ ಪೇಟೆಯಲ್ಲಿ ಆಧುನಿಕ ರೀತಿಯಲ್ಲಿರುವ ಶೌಚಾ ಲಯ ತುರ್ತಾಗಿ ನಿರ್ಮಿಸಬೇಕೆಂಬ ಬೇಡಿಕೆಯೊಂದಿಗೆ ವ್ಯಾಪಾರಿಗಳು, ವಿದ್ಯಾರ್ಥಿಗಳು, ಸ್ಥಳೀಯರು ಮತ್ತೆ ಆಂದೋಲನಕ್ಕಿಳಿಯುತ್ತಿದ್ದಾರೆ. ಕುಂಬಳೆ ಶ್ರೀ ಗೋಪಾಲಕೃಷ್ಣ ಕ್ಷೇತ್ರ ನವೀಕರಣೆಯಂಗವಾಗಿ ೨೦೨೪ ಫೆ. ೧೬ರಿಂದ ೨೫ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಸಿದ್ಧತೆಗಳು ಪ್ರಗತಿಯಲ್ಲಿರುವಂತೆ ಪೇಟೆಯಲ್ಲಿ ಶೌಚಾಲಯ ಸಹಿತದ ಮೂಲಭೂತ ಸೌಕರ್ಯ ಅಭಿವೃದ್ಧಿ ಇಲ್ಲದೆ ಭಕ್ತರನ್ನು ಸಂಕಷ್ಟಕ್ಕೆ ತಳ್ಳಲಿದೆ ಎಂದು ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಸುಮಾರು ೧೦ ಲಕ್ಷಕ್ಕೂ ಅಧಿಕ ಭಕ್ತಜನರು ಬ್ರಹ್ಮಕಲಶ ಮಹೋತ್ಸವಕ್ಕೆ ತಲುಪುವರೆಂದು ನಿರೀಕ್ಷಿಸಲಾಗಿದ್ದು, ಇದಕ್ಕೂ ಮುಂಚಿತ ಪೇಟೆಯಲ್ಲಿ ಮೂಲಭೂತ ಸೌಕರ್ಯವನ್ನು ಏರ್ಪಡಿಸಲು ಕುಂಬಳೆ ಪಂಚಾಯತ್ ಕ್ರಮ ಕೈಗೊಳ್ಳಬೇಕೆಂದು ಬೇಡಿಕೆ ಮೂಡಿ ಬಂದಿದೆ. ಈ ಮಧ್ಯೆ ಪೇಟೆಯ ಇನ್ನೊಂದು ಪ್ರಧಾನ ಅಗತ್ಯವಾಗಿದ್ದ ಮೀನು ಮಾರುಕಟ್ಟೆಯ ನವೀಕರಣೆಗೆ ೧.೧೨ ಕೋಟಿ ರೂ.ಗಳ ಯೋಜನೆಗೆ ಟೆಂಡರ್ ಕ್ರಮಗಳು ಪೂರ್ತಿ ಯಾಗಿರುವುದು ಮೀನು ಕಾರ್ಮಿಕರಿಗೂ, ವ್ಯಾಪಾರಿಗಳಿಗೂ ಬಹಳಷ್ಟು ನಿರೀಕ್ಷೆ ಮೂಡಿಸಿದೆ.