ಪೊಲೀಸರ ವೇಷದಲ್ಲಿ ಕಾರು ತಡೆದು ನಿಲ್ಲಿಸಿ 1.75 ಲಕ್ಷ ರೂ. ಎಗರಿಸಿದ ಪ್ರಕರಣ: ಮೂವರ ಸೆರೆ
ಕಾಸರಗೋಡು: ಪೊಲೀಸರ ವೇಷ ಧರಿಸಿದ ವ್ಯಕ್ತಿ ತನ್ನ ಸ್ನೇಹಿತರೊಂದಿಗೆ ಸೇರಿ ಕಾರು ತಡೆದು ನಿಲ್ಲಿಸಿ ವ್ಯಾಪಾರಿಯ 1.75 ಲಕ್ಷ ರೂ. ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬೇಕಲ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಕೆ.ಪಿ. ಶೈನ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.
ಕೋಡೋಂಬೇಳೂರಿಗೆ ಸಮೀಪದ ಬೇಳೂರು ಏಳನೇ ಮೈಲು ನಿವಾಸಿ ಕೆ. ನೌಶೀಫ್ (30), ಏಳನೇ ಮೈಲು ಕಾಯಲಡ್ಕದ ವಿ. ರಂಶೀದ್ (31) ಮತ್ತು ಹೊಸದುರ್ಗ ಮೀನಾಪೀಸ್ ಬಳಿ. ಕೆ. ಮೊಹಮ್ಮದ್ ಸಿನಾನ್ (19) ಬಂಧಿತರಾದ ಆರೋಪಿಗಳು.
ಹೊಸದುರ್ಗ ನೋರ್ತ್ ಕೋಟಚ್ಚೇರಿ ವ್ಯಾಪಾರಿ ಬಿ. ಸಂಸುಸಲಾಮ್ ಕಳೆದ ನವಂಬರ್ ೧೬ರಂದು ಬೆಳಿಗ್ಗೆ ಪಳ್ಳಿಕ್ಕೆರೆ ಕಲ್ಲಿಂಗಾಲ್‌ನಲ್ಲಿರುವ ತಮ್ಮ ಮನೆಯಿಂದ ಕಾರಿನಲ್ಲಿ ನೋರ್ತ್ ಕೋಟಚ್ಚೇರಿಗೆ ಹೋಗುತ್ತಿದ್ದ ದಾರಿ ಮಧ್ಯೆ ಪಳ್ಳಿಕ್ಕೆರೆ ಚೇಟುಕುಂಡ್ ತಲುಪಿದಾಗ ಇನ್ನೊಂದು ಕಾರಿನಲ್ಲಿ ಬಂದ ತಂಡ ಸಂಸುಸಲಾಮ್‌ರ ಕಾರನ್ನು ತಡೆದು ನಿಲ್ಲಿಸಿ ಅವರನ್ನು ಬಲವಂತವಾಗಿ ಹಿಡಿದು ಆ ಕಾರಿನ ಹಿಂದಿನ ಸೀಟಿನಲ್ಲಿ ಕುಳ್ಳಿರಿಸಿ ಕಾರನ್ನು ಚಾಮುಂಡಿಕುನ್ನು ಕೊಟ್ಟಿಲಂಗಾಡ್ ಸೇತುವೆ ಬಳಿಗೊಯ್ದು ಅಲ್ಲಿ ಕಾರಿನ ಡ್ಯಾಶ್ ಬೋರ್ಡ್‌ನಲ್ಲಿರಿಸಿದ್ದ 1.75 ಲಕ್ಷ ರೂ. ಎಗರಿಸಿರುವುದಾಗಿ ಆರೋಪಿಸಿ ಸಂಸುಸಲಾಮ್ ನೀಡಿದ ದೂರಿನಂತೆ ಬೇಕಲ ಪೊಲೀಸರು ಏಳು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಆ ಪೈಕಿ ಮೂವರನ್ನು ಈಗ ಬಂಧಿಸಲಾಗಿದೆ.