ಕಾಸರಗೋಡು: ಬೈಕ್ಗೆ ಬಸ್ ಢಿಕ್ಕಿ ಹೊಡೆದು ಪುಟ್ಟ ಮಕ್ಕಳಿಬ್ಬರು ದಾರುಣವಾಗಿ ಸಾವನ್ನಪ್ಪಿದ ಪ್ರಕರಣದ ಆರೋಪಿಯಾಗಿರುವ ಬಸ್ ಚಾಲಕನಿಗೆ ಕಾಸರಗೋಡು ಚೀಫ್ ಜ್ಯುಡೀಶ್ಯಲ್ ಮೆಜಿಸ್ಟ್ರೇಟ್ ನ್ಯಾಯಾಲಯ ೨ ವರ್ಷ ಸಜೆ ವಿಧಿಸಿ ತೀರ್ಪು ನೀಡಿದೆ.
ಬಸ್ ಚಾಲಕ ಮಂಜೇಶ್ವರ ನಿವಾಸಿ ಗೌತಮ್ (30) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಮೊಗ್ರಾಲ್ ಪುತ್ತೂರಿಗೆ ಸಮೀಪದ ಚೌಕಿ ನಿವಾಸಿ ಎ.ಕೆ. ರಜೀಶ್ ಎಂಬವರ ಮಕ್ಕಳಾದ ಮೊಹಮ್ಮದ್ ಮಿನಾಸ್ (ನಾಲ್ಕೂವರೆ ವರ್ಷ) ಮತ್ತು ಇಬ್ರಾಹಿಂ ಹಾಶಿಂ (7) ಎಂಬಿಬ್ಬರು ಮಕ್ಕಳು ಅಪಘಾತದಲ್ಲಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ಈ ಶಿಕ್ಷೆ ವಿಧಿಸಲಾಗಿದೆ.
2018 ಜುಲೈ 22ರಂದು ರಾತ್ರಿ ನಗರದ ಅಡ್ಕತ್ತಬೈಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ವಾಹನ ಅಪಘಾತ ನಡೆದಿತ್ತು. ರಜೀಶ್ ತನ್ನ ಇಬ್ಬರು ಮಕ್ಕಳೊಂದಿಗೆ ಬೈಕ್ನಲ್ಲಿ ಚೌಕಿಯಲ್ಲಿರುವ ತಮ್ಮ ಮನೆಗೆ ಹೋಗುತ್ತಿದ್ದ ವೇಳೆ ಕಾಸರಗೋಡು ಭಾಗದಿಂದ ಮೊಗ್ರಾಲ್ ಪುತ್ತೂರಿನತ್ತ ಹೋಗುತ್ತಿದ್ದ ಮಿನಿ ಬಸ್ ರಜೀಶ್ ಚಲಾಯಿಸುತ್ತಿದ್ದ ಬೈಕ್ಗೆ ಮಾತ್ರವಲ್ಲ ಇನ್ನೊಂದು ಬೈಕ್ ಮತ್ತು ಕಾರಿಗೂ ಢಿಕ್ಕಿ ಹೊಡೆದಿತ್ತು. ಇದರಲ್ಲಿ ರಜೀಶ್ ಸಂಭಾವ್ಯ ಅನಾಹುತದಿಂದ ಅದೃಷ್ಟವಶಾತ್ ಪಾರಾದರೆ ಅವರ ಜೊತೆ ಬೈಕ್ನಲ್ಲಿ ಸಂಚರಿಸುತ್ತಿದ್ದ ಅವರ ಪುತ್ರರಿಬ್ಬರೂ ಗಂಭೀರ ಗಾಯಗೊಂಡು ಬಳಿಕ ಸಾವನ್ನಪ್ಪಿದ್ದರು.
ಈ ಪ್ರಕರಣದಲ್ಲಿ ಉತ್ತರ ಪ್ರದೇ ಶದ ಗ್ರಾಮೀಣ ವಲಯದಲ್ಲಿರುವ ಸಿದ್ಧಾರ್ಥ್ ನಗರದ ನಿವಾಸಿ ಜಮಾಲ್ ಅಹಮ್ಮದ್ ಎಂಬವರು ಮುಖ್ಯ ಸಾಕ್ಷಿದಾರರಾಗಿದ್ದರು. ವಿಚಾರಣೆ ವೇಳೆ ಅವರು ಉತ್ತರ ಪ್ರದೇಶದಿಂದ ಕಾಸರಗೋಡಿಗೆ ಆಗಮಿಸಿ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿಕೆ ನೀಡಿದ್ದರು. ಅದು ಆರೋ ಪಿಗೆ ಶಿಕ್ಷೆ ನೀಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು. ಕಾಸರಗೋಡು ಟ್ರಾಫಿಕ್ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.







