ಬಾಲಕಿಗೆ ಲೈಂಗಿಕ ಕಿರುಕುಳ: ಮದ್ರಸಾ ಅಧ್ಯಾಪಕನಿಗೆ ೨೦ ವರ್ಷ ಕಠಿಣ ಸಜೆ

ಕಾಸರಗೋಡು: ಒಂಬತ್ತು ವರ್ಷದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (೧)ದ ನ್ಯಾಯಾಧೀಶರಾದ ಎ. ಮನೋಜ್ ಅವರು ೨೦ ವರ್ಷ ಕಠಿಣ ಸಜೆ ಮತ್ತು ಎರಡು ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಪೈವಳಿಕೆ ಕುರುಡಪದವು ಸುಂಕದಕಟ್ಟೆಯ ಆದಂ ಡಿ.  (೩೮) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ, ಆರೋಪಿ ಎರಡು ವರ್ಷ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದೂ ತೀರ್ಪಿನಲ್ಲಿ ತಿಳಿಸಲಾಗಿದೆ.

೨೦೧೮ ಸೆಪ್ಟಂಬರ್ ತಿಂಗಳ  ಒಂದು ಆದಿತ್ಯವಾರದಂದು ಬಾಲಕಿಗೆ ಮದ್ರಸಾ ಅಧ್ಯಾಪಕನೂ ಆಗಿರುವ ಆರೋಪಿ ಆದಂ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಕುಂಬಳೆ ಪೊಲೀಸರು ಆತನ ವಿರುದ್ಧ ಪೋಕ್ಸೋ ಕಾನೂನು ಪ್ರಕರಣ ದಾಖಲಿಸಿಕೊಂಡಿದ್ದರು. ಅಂದು ಪ್ರಸ್ತುತ ಪೊಲೀಸ್ ಇನ್ಸ್‌ಪೆಕ್ಟರ್ ಆಗಿದ್ದ ಎಂ. ಕೃಷ್ಣನ್‌ರವರು ಈ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ವಿಧಿಸಲಾಗಿದೆ. ಪ್ರೋಸಿಕ್ಯೂಷನ್ ಪರವಾಗಿ ಸ್ಪೆಷಲ್ ಪಬ್ಲಿಕ್ ಪ್ರೋಸಿಕ್ಯೂಟರ್ ಪಿ.ಆರ್. ಪ್ರಕಾಶ್ ಅಮ್ಮಣ್ಣಾಯ ನ್ಯಾಯಾಲಯದಲ್ಲಿ ವಾದಿಸಿದ್ದರು.

You cannot copy contents of this page