ಮುಂಜಾನೆ ಮನೆಯಲ್ಲಿ ಪಾತ್ರೆ ತೊಳೆಯುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿ ಕಳ್ಳರು ಪರಾರಿ

ಕಾಸರಗೋಡು: ಮುಂಜಾನೆ ಮನೆ ಬಳಿ ಪಾತ್ರೆ ತೊಳೆಯುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಕಳ್ಳರು ಚಿನ್ನದ ಸರ ಎಗರಿಸಿ ಪರಾರಿಯಾದ ಘಟನೆ ನಡೆದಿದೆ.

ನೀಲೇಶ್ವರ ಎರಿಕುಳಂನ ವೇಟ ಕ್ಕೊರುಮಗನ್ ಕೊಟ್ಟಾರಂ ಕ್ಷೇತ್ರ ಬಳಿಯ ಕಳರಿಕ್ಕೋತ್ ಸರೋಜಮ್ಮ (೬೮) ಎಂಬವರ ಚಿನ್ನದ ಸರವನ್ನು ಎಗರಿಸಲಾಗಿದೆ. ಮುಂಜಾನೆ ೪.೩೦ಕ್ಕೆ ನಾನು ಮನೆಯ ಹೊರಗೆ ಪಾತ್ರೆ ತೊಳೆಯುತ್ತಿದ್ದ ವೇಳೆ ಅಲ್ಲಿ ಬಂದ ಇಬ್ಬರು ಕಳ್ಳರು ತನ್ನ ಬಾಯಿ ಮತ್ತು ಮೂಗನ್ನು ಬಿಗಿಯಾಗಿ ಒತ್ತಿ ಹಿಡಿದು ನನ್ನ ಕುತ್ತಿಗೆಯಲ್ಲಿದ್ದ ಮೂರು ಪವನ್‌ನ ಚಿನ್ನದ ಸರ ಎಗರಿಸಲೆತ್ನಿಸಿದ್ದರು. ಆಗ ನಾನು ಅದನ್ನು ಹೇಗೋ ತಡೆದಾಗ ಕಳ್ಳರು ತನ್ನ ಸರವನ್ನು ಹಿಡಿದೆಳೆದರು. ಆಗ ನಾನು ಸರವನ್ನು  ಬಿಗಿಯಾಗಿ ಹಿಡಿದಾಗ ಅದು ತುಂಡಾಗಿ ಅರ್ಧ ಭಾಗ ಕಳ್ಳರ ಕೈಸೇರಿದೆ.  ಅದರ ಸಹಿತ  ಕಳ್ಳರು ತಕ್ಷಣ ಕತ್ತಲ ಮರೆಯಲ್ಲಿ ಪರಾರಿಯಾದರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಸರೋಜಿನಿ ಅಮ್ಮ  ಘಟನೆಯನ್ನು ವಿವರಿಸಿದ್ದಾರೆ. ಈ ಬಗ್ಗೆ ನೀಲೇಶ್ವರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಮಹಿಳೆಯರ ಚಿನ್ನದ ಸರ, ಮೊಬೈಲ್ ಫೋನ್ ಇತ್ಯಾದಿ ಗಳನ್ನು ಕಳ್ಳರು ಎಗರಿಸಿ ಪರಾರಿಯಾಗುತ್ತಿರುವ ಕೃತ್ಯಗಳು ಜಿಲ್ಲೆಯ ಹಲವೆಡೆಗಳಲ್ಲಿ  ಕಳೆದ ಕೆಲವು ತಿಂಗಳುಗಳಿಂದ ಸಾಧಾರಣವಾಗಿ ನಡೆಯುತ್ತಿದೆ. ಇದರಿಂದ ಚಿನ್ನ ಧರಿಸಿದ ಮಹಿಳೆಯರು ಮನೆಯಿಂದ ಹೊರ ಹೋಗಲು ಭಯಪಡುತ್ತಿರುವ ವೇಳೆಯಲ್ಲೇ ಕಳ್ಳರು ಈಗ ನೇರವಾಗಿ ಮನೆಗೇ ನುಗ್ಗಿ ಚಿನ್ನ ಎಗರಿಸುವುದು ಜನರನ್ನು ಇನ್ನಷ್ಟು ಭಯ ಹಾಗೂ ಆತಂಕಕ್ಕೊಳಗಾಗುವಂತೆ ಮಾಡಿದೆ. ಇಷ್ಟೆಲ್ಲಾ ಆದರೂ ಚಿನ್ನದ ಸರ ಎಗರಿಸುವ ಕಳ್ಳರನ್ನು ಪತ್ತೆಹಚ್ಚಿ ಸೆರೆಹಿಡಿಯಲು ಪೊಲೀಸರಿಗೆ ಇನ್ನೂ ಸಾಧ್ಯವಾಗದಿರುವುದು ಜನರನ್ನು ಇನ್ನಷ್ಟು ಆತಂಕಕ್ಕೊಳಪಡಿಸತೊಡಗಿದೆ.

Leave a Reply

Your email address will not be published. Required fields are marked *

You cannot copy content of this page