ರಾಷ್ಟ್ರೀಯ ಮುಷ್ಕರ ಇಂದು ರಾತ್ರಿಯಿಂದ

ಕಾಸರಗೋಡು: ವಿವಿಧ ಕಾರ್ಮಿಕ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ವಿವಿಧ ಬೇಡಿಕೆಗಳನ್ನು ಮುಂದಿರಿಸಿ ನಡೆಸುವ ರಾಷ್ಟ್ರೀಯ ಸಾರ್ವತ್ರಿಕ ಮುಷ್ಕರ ಇಂದು ರಾತ್ರಿ 12 ಗಂಟೆಗೆ ಆರಂಭಗೊಂಡು ನಾಳೆ ರಾತ್ರಿ 12 ಗಂಟೆ ತನಕ ಮುಂದುವರಿಯಲಿದೆ.

ಕಾರ್ಮಿಕರ ಹತ್ತು ಸಂಘಟನೆಗಳು ಮತ್ತು  ಅವುಗಳ ಸಹವರ್ತಕ ವೇದಿಕೆಯ ನೇತೃತ್ವದಲ್ಲಿ ಈ ಮುಷ್ಕರ ನಡೆಯಲಿದೆ. ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ, ರೈತ ವಿರೋಧಿ, ರಾಷ್ಟ್ರವಿರೋಧಿ ಮತ್ತು ಕಾರ್ಪರೇಟ್ ಪರವಾದ ನೀತಿಗಳನ್ನು ಅನುಸರಿಸುತ್ತಿದೆಯೆಂದು ಆರೋಪಿಸಿ ಇದನ್ನು ವಿರೋಧಿಸಿ ಸಂಯುಕ್ತ ರಾಷ್ಟ್ರೀಯ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ. ಬ್ಯಾಂಕಿಂಗ್, ವಿಮೆ, ಅಂಚೆ, ಕಲ್ಲಿದ್ದಲು, ಗಣಿಗಾರಿಕೆ, ಸಾರಿಗೆ, ಹೆದ್ದಾರಿಗಳು ಮತ್ತು ನಿರ್ಮಾಣ ವಲಯದಲ್ಲಿ ದುಡಿಯುತ್ತಿರುವ ಕೋಟಿಗಟ್ಟಲೆ ಕಾರ್ಮಿಕರು ನಾಳೆಯ ರಾಷ್ಟ್ರೀಯ ಮುಷ್ಕರದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಹಾಗೆ ನಡೆದಲ್ಲಿ ದೇಶಾದ್ಯಂತ ವಿವಿಧ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆ  ಇದೆ. ಒಟ್ಟು ೧೭ ಬೇಡಿಕೆಗಳನ್ನು ಕಾರ್ಮಿಕ ಸಂಘಟನೆಗಳು ಕೇಂದ್ರಸರಕಾರದ ಮುಂದಿರಿಸಿವೆ. ಕೇಂದ್ರ ಸರಕಾರದ ಆರ್ಥಿಕ ನೀತಿಗಳು ಇನ್ನಷ್ಟು ನಿರುದ್ಯೋಗ, ಅವಶ್ಯಕ ಸಾಮಗ್ರಿಗಳ ಬೆಲೆ ಏರಿಕೆ, ವೇತನ ಇಳಿಕೆ, ಸಾಮಾಜಿಕ ವಲಯಗಳ ಮೇಲಿನ ವೆಚ್ಚ ಇಳಿಕೆಗೆ ಕಾರಣವಾಗಲಿದೆ ಮಾತ್ರವಲ್ಲದೆ ಇದು ಅಸಮಾನತೆಯನ್ನು ಹೆಚ್ಚಿಸಲಿದೆ ಎಂದು ಸಂಯುಕ್ತ ಮುಷ್ಕರ ಸಮಿತಿ ಹೇಳುತ್ತಿದೆ.

ಕೆಲವು ಕಾರ್ಮಿಕ ಸಂಘಟನೆಗಳು ನಾಳೆ ಆಹ್ವಾನ ನೀಡಿರುವ ರಾಷ್ಟ್ರೀಯ ಸಾರ್ವತ್ರಿಕ ಮುಷ್ಕರ ರಾಜಕೀಯ  ಪ್ರೇರಿತವಾದುದೆಂದೂ, ಆದ್ದರಿಂದ ಬಿಎಂಎಸ್ ಇದರಲ್ಲಿ ಪಾಲ್ಗೊಳ್ಳುವುದಿಲ ವೆಂದು ಬಿಎಂಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಕೆ. ಅಜಿತ್ ಇದೇ ಸಂದರ್ಭದಲ್ಲಿ ಹೇಳಿದ್ದಾರೆ. ಕಾರ್ಮಿಕರಿಗೆ ಕನಿಷ್ಠ ವೇತನ ರೂಪದಲ್ಲಿ 26,೦೦೦ ರೂ. ನೀಡಬೇಕೆಂದು ಆಗ್ರಹಿಸುವ ಮುಷ್ಕರ ನಿರತ  ಕಾರ್ಮಿಕ ಸಂಘಟ ನೆಗಳು ಸಿಪಿಐ ಮತ್ತು ಸಿಪಿಐ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಇದನ್ನು ಜ್ಯಾರಿಗೊಳಿಸಲಾಗುತ್ತಿದೆಯೇ ಎಂಬುವುದನ್ನು ಅವರು ಮೊದಲು ಪರಿಶೀಲಿಸಿ ಅದಕ್ಕೆ ಸ್ಪಷ್ಟ ಉತ್ತರ ನೀಡಬೇಕೆಂದೂ ಅವರು ಹೇಳಿದ್ದಾರೆ.

ಸಿಬ್ಬಂದಿಗಳಿಗೆ ಸಂರಕ್ಷಣೆ ನೀಡಬೇಕು-ಕೆ.ಜೆ.ಒ ಸಂಘ್

ವಿವಿಧ ಕಾರ್ಮಿಕರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ  ನಾಳೆ ಆಹ್ವಾನ ನೀಡಲಾಗಿರುವ ರಾಷ್ಟ್ರೀಯ ಮುಷ್ಕರ ರಾಜಕೀಯ ಪ್ರೇರಿತವಾಗಿದ್ದು, ಅದರಲ್ಲಿ ನಾವು ಭಾಗವಹಿಸೆವೆಂದು ಕೇರಳ ಗಜೆಟೆಡ್  ಆಫೀಸರ್ಸ್ ಸಂಘ್ (ಕೆಜೆಒ ಸಂಘ್) ಇದರ ರಾಜ್ಯ ಅಧ್ಯಕ್ಷ ಬಿ. ಮನು ತಿಳಿಸಿದ್ದಾರೆ.

ಮುಷ್ಕರದ ಹಿನ್ನೆಲೆಯಲ್ಲಿ ನಾಳೆ ಕೆಲಸಕ್ಕೆ ಹಾಜರಾಗುವ ಸಿಬ್ಬಂದಿಗಳಿಗೆ ಸೂಕ್ತ ಸಂರಕ್ಷಣೆ ನೀಡಬೆಕೆಂದೂ ಅವರು ಆಗ್ರಹಪಟ್ಟಿದ್ದಾರೆ.

Leave a Reply

Your email address will not be published. Required fields are marked *

You cannot copy content of this page