ವೈದ್ಯಕೀಯ ಶಿಬಿರ ನಡೆಸಿದ ನಕಲಿ ವೈದ್ಯ ಬಂಧನ

ಕಾಸರಗೋಡು: ನಕಲಿ ಔಷಧಿ ತಯಾರಿಸುವುದರೊಂದಿಗೆ ಚಿಕಿತ್ಸೆಯನ್ನೂ ನೀಡುತ್ತಿದ್ದ ಆರೋಪದಂತೆ ನಕಲಿ ವೈದ್ಯನನ್ನು ಬಂಧಿಸಲಾಗಿದೆ. ಪಾಲಕ್ಕಾಡ್ ಮಣ್ಣಾರ್‌ಕಾಡ್ ಕಳರಿಕ್ಕಲ್ ಹೌಸ್‌ನ ಸಿ.ಎಂ. ಜಮಾಲುದ್ದೀನ್ 56) ಎಂಬಾತನನ್ನು ಮಂಜೇಶ್ವರ ಎಸ್‌ಐ ಕೆ.ವಿ. ಸುಮೇಶ್‌ರಾಜ್ ಬಂಧಿಸಿದ್ದಾರೆ. ನಿನ್ನೆ ಉಪ್ಪಳ ಪಚ್ಲಂಪಾರೆಯಿಂದ ಈತನನ್ನು ಬಂಧಿಸಲಾಗಿದೆ.

ಅಲ್ಲಿನ ಫ್ರೆಂಡ್ಸ್‌ಕ್ಲಬ್‌ನಲ್ಲಿ ಜಮಾಲುದ್ದೀನ್‌ನ ನೇತೃತ್ವದಲ್ಲಿ ಶಿಬಿರ ನಡೆಸಲಾಗಿತ್ತು. ಯಾವುದೇ ಅರ್ಹತೆಯೋ, ದಾಖಲೆ ಪತ್ರಗಳೂ ಇಲ್ಲದೆ  ರೋಗಿಗಳನ್ನು ತಪಾಸಣೆ ನಡೆಸಿ ಔಷಧಿ ನೀಡಿದನೆಂಬ ಆರೋಪದಂತೆ ಈತನನ್ನು ಬಂಧಿಸಲಾಗಿದೆ. ನಕಲಿ ವೈದ್ಯ ವೈದ್ಯಕೀಯ ಶಿಬಿರ ನಡೆಸುತ್ತಿರುವ ಬಗ್ಗೆ ಜಿಲ್ಲಾ ಮೆಡಿಕಲ್ ಆಫೀಸರ್ ಕೆ. ಸಂತೋಷ್‌ರಿಗೆ ಮಾಹಿತಿ ಲಭಿಸಿತ್ತು. ಈ ಕುರಿತು ತನಿಖೆ ನಡೆಸಲು ಡೆಪ್ಯುಟಿ ಜಿಲ್ಲಾ ಮೆಡಿಕಲ್ ಆಫೀಸರ್‌ರಿಗೆ ಹೊಣೆಗಾರಿಕೆ ನೀಡಲಾಯಿತು. ಅವರು ಸ್ಥಳಕ್ಕೆ ತಲುಪಿ ನಡೆಸಿದ ಪರಿಶೀಲನೆಯಲ್ಲಿ ಜಮಾಲುದ್ದೀನ್‌ಗೆ ಯಾವುದೇ ಅರ್ಹತೆ ಇಲ್ಲವೆಂದು ಪತ್ತೆಹಚ್ಚಲಾಗಿದೆ.

ಅನಂತರ ಡಿಎಂಒ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಜಮಾಲುದ್ದೀನ್ ವಿರುದ್ಧ ಬೇರೆಲ್ಲಾದರೂ ಕೇಸುಗಳಿವೆಯೇ ಎಂದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page