ಸುಹಾಸ್ ಶೆಟ್ಟಿ ಕೊಲೆ: ಆರೋಪಿಗಳ ಗುರುತು ಪತ್ತೆ

ಮಂಗಳೂರು: ಬಜರಂಗದಳ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಆರೋಪಿಗಳ ಗುರುತು ಸಿಕ್ಕಿದ್ದು, ಅವರನ್ನು ಶೀಘ್ರ ಬಂಧಿಸಲಾಗುವುದೆಂದು ದಕ್ಷಿಣ ಕನ್ನಡ ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್. ಹಿತೇಂದ್ರ ಇಂದು ಬೆಳಿಗ್ಗೆ ಸುದ್ಧಿಗಾರರಲ್ಲಿ ತಿಳಿಸಿದ್ದಾರೆ.

ಸುಹಾಸ್ ಹತ್ಯೆ ಹಿನ್ನೆಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ. ಆದ್ದರಿಂದ ನಾವು ಭದ್ರತೆಗೆ ಸೂಕ್ತ ವ್ಯವಸ್ಥೆಗಳನ್ನು ಮಾಡಿದ್ದೇವೆ. ಸುಹಾಸ್‌ರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಅಂತಿಮ ಕ್ರಿಯೆಗಳ ಸಿದ್ಧತೆಯನ್ನು ನಡೆಸಲಾಗುತ್ತಿದೆ. ಆ ವೇಳೆ ಇನ್ನಷ್ಟು ಹೆಚ್ಚಿನ ಭದ್ರತೆ ಏರ್ಪಡಿಸಲಾಗುವುದು. ಜನತೆ ಯಾವುದೇ ವದಂತಿಗಳಿಗೆ ಕಿವಿಗೊಡದೆ ಶಾಂತ ರೀತಿಯಲ್ಲಿ ವರ್ತಿಸಬೇಕೆಂದು ಅವರು ವಿನಂತಿಸಿಕೊಂಡಿದ್ದಾರೆ.

ಸುಹಾಸ್ ಶೆಟ್ಟಿ ಕೊಲೆ ಹಿನ್ನೆಲೆಯಲ್ಲಿ ಬಂದ್‌ಗೆ ಕರೆ ನೀಡಲಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಎಲ್ಲಾ ಶಾಲಾ ಕಾಲೇಜುಗಳಿಗೂ ಇಂದು ರಜೆ ಘೋಷಿಸಲಾಗಿದೆ. ಇದೇ ವೇಳೆ ಮಂಗಳೂರು ನಾರಾಯಣಗುರು ವೃತ್ತದ ಬಳಿ ಕೆಲವು ಕಿಡಿಗೇಡಿಗಳು  ಬಸ್‌ಗಳ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಬಂದ್‌ನ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳು ಸಂಪೂರ್ಣವಾಗಿ  ಸೇವೆ ಮೊಟಕುಗೊಳಿಸಿವೆ. ವ್ಯಾಪಾರ ವಹಿವಾಟು ಅಂಗಡಿಗಳೂ ಸಂಪೂರ್ಣ ಮುಚ್ಚಿಕೊಂಡಿವೆ.

ಕೊಲೆಗೈಯ್ಯಲ್ಪಟ್ಟ ಸುಹಾಸ್ ಶೆಟ್ಟಿ ನಿನ್ನೆ ರಾತ್ರಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬಜ್ಪೆ ಕಿನ್ನಿಪದವಿನಲ್ಲಿ ಬೈಕ್ ಮತ್ತು ಇತರ ವಾಹನಗಳಲ್ಲಾಗಿ ಬಂದ ಅಕ್ರಮಿಗಳ ತಂಡ ಸುಹಾಸ್ ಶೆಟ್ಟಿಯ ಮೇಲೆ ಎರಗಿ ಮಾರಕಾಯುಧಗಳಿಂದ ಅವರನ್ನು ಯದ್ವಾತದ್ವ ಕಡಿದು ಬರ್ಭರವಾಗಿ ಕೊಲೆಗೈದಿದೆ. ಆ ವೇಳೆ ಸುಹಾಸ್‌ರ ಕಾರಿನಲ್ಲಿದ್ದ ಇತರ ಸ್ನೇಹಿತರೂ ಸೇರಿ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ೨೦೨೨ ಜುಲೈಯಲ್ಲಿ ಬಿಜೆಪಿ ನೇತಾರ ಪ್ರವೀಣ್ ನೆಟ್ಟಾರುರ ಕೊಲೆ ನಡೆದಿತ್ತು. ಅದಾದ ಎರಡು ದಿನಗಳ ನಂತರ ಸುರತ್ಕಲ್‌ನಲ್ಲಿ ಮೊಹಮ್ಮದ್ ಫಾಸಿಲ್ ಎಂಬಾತನನ್ನು ಕೊಲೆಗೈಯ್ಯಲಾಗಿತ್ತು. ಆ ಕೊಲೆಯಲ್ಲಿ ಸುಹಾಸ್ ಶೆಟ್ಟಿ ಆರೋಪಿಯಾಗಿದ್ದು, ಅದಕ್ಕೆ ಪ್ರತಿಕಾರವಾಗಿ ಅವರನ್ನು ಕೊಲೆಗೈದಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

RELATED NEWS

You cannot copy contents of this page