ಅಕ್ಟೋಬರ್ನಲ್ಲಿ 250ರಷ್ಟು ಕಗ್ಗಲ್ಲು ಕೋರೆಗಳ ಚಟುವಟಿಕೆ ಸ್ಥಗಿತ
ಕಾಸರಗೋಡು: ರಾಜ್ಯದಲ್ಲಿ ಜಲ್ಲಿ ಕಲ್ಲು ಮತ್ತು ಕಗ್ಗಲ್ಲುಗಳ ಕ್ಷಾಮ ತೀವ್ರಗೊಳ್ಳತೊಡ ಗಿರುವ ವೇಳೆಯಲ್ಲೇ, ರಾಜ್ಯದಲ್ಲಿ ಈಗ ಕಾರ್ಯವೆಸಗುತ್ತಿರುವ ಕಗ್ಗಲ್ಲು ಗಣಿಗಾರಿಕೆ ಪೈಕಿ 250 ಕೋರೆಗಳು ಮುಂದಿನ ಅಕ್ಟೋಬರ್ ತಿಂಗಳಿಂದ ಕಾರ್ಯರಹಿತಗೊಳ್ಳಲಿದೆ. ಇವುಗಳಿಗೆ ಲೈಸನ್ಸ್ ನೀಡಬೇಕಾಗಿರುವ ಜಿಲ್ಲಾ ಮಟ್ಟದ ಸಮಿತಿಗಳನ್ನು ಹಸಿರು ಟ್ರಿಬ್ಯೂನಲ್ ಬರ್ಖಾಸ್ತುಗೊಳಿಸಿರುವುದೇ ಇದಕ್ಕೆ ಪ್ರಧಾನ ಕಾರಣವಾಗಿದೆ.
ಉತ್ತರ ಭಾರತದ ಹಲವು ಗಣಿಗಳಲ್ಲಿ ಕೆಲವು ಸಮಿತಿಗಳು ನಿಗದಿತ ಅರ್ಹತೆ ಹೊಂದಿದವರನ್ನು ಒಳ ಪಡಿಸಿದೆ ಎಂಬ ಕಾರಣ ತೋರಿಸಿ ಸಮಿತಿಗಳು ಹಸಿರು ಟ್ರಿಬ್ಯೂನಲ್ ರದ್ದುಪಡಿಸಿತ್ತು. ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಸಮಿತಿಯ ಅನುಮತಿಯೊಂದಿಗೆ ಕೇರಳದಲ್ಲಿ ೨೫೦ರಷ್ಟು ಗಣಿಗಳು ಈಗ ಕಾರ್ಯವೆಸಗುತ್ತಿವೆ. 2018-19ನೇ ಆರ್ಥಿಕ ವರ್ಷದಲ್ಲಿ ಈ 250 ಗಣಿಗಳಿಗೆ ಜಿಲ್ಲಾ ಮಟ್ಟದ ಸಮಿತಿ ಐದು ವರ್ಷಗಳ ತನಕದ ಕಾರ್ಯ ನಿರ್ವಹಣಾ ಅನುಮತಿ ನೀಡಿತ್ತು. ಆ ಅವಧಿ ಅಕ್ಟೋಬರ್ ತಿಂಗಳಲ್ಲಿ ಕೊನೆಗೊಳ್ಳಲಿದೆ. ಆದರೆ ಈಗ ಜಿಲ್ಲಾ ಸಮಿತಿಗಳನ್ನು ಟ್ರಿಬ್ಯೂನಲ್ ಬರ್ಖಾಸ್ತುಗೊಳಿಸಿರುವುದರಿಂದಾಗಿ ಈ 250 ಗಣಿಗಳು ಅನುಮತಿಗಾಗಿರುವ ಅರ್ಜಿಗಳನ್ನು ಇನ್ನು ರಾಜ್ಯಮಟ್ಟದ ಸಮಿತಿಗೆ ಸಲ್ಲಿಸಬೇಕಾಗಿ ಬರಲಿದೆ. ಆದರೆ ಇಂತಹ ಪ್ರಕ್ರಿಯೆಗಳಿಗೆ ರಾಜ್ಯ ಮಟ್ಟದ ಸಮಿತಿ ವತಿಯಿಂದ ವಿಳಂಬ ಉಂಟಾಗಬಹುದು ಎಂಬ ಆತಂಕ ಗಣಿಗಾರಿಕಾ ಮಾಲಕರಲ್ಲಿ ಈಗ ಮನೆ ಮಾಡಿದೆ.