ಅಡ್ಕ, ಮವ್ವಾರು, ಸುಬ್ರಾಯ ಹೊಳ್ಳರಿಗೂ ಗೌರವ: ಖ್ಯಾತ ಹಿಮ್ಮೇಳವಾದಕ ಮಾಂಬಾಡಿ ಸುಬ್ರಹ್ಮಣ್ಯ ಭಟ್‌ರಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಪಾರ್ತಿಸುಬ್ಬ ಪ್ರಶಸ್ತಿ: 16ರಂದು ಪ್ರದಾನ
ಕಾಸರಗೋಡು: ಕರ್ನಾಟಕ ಯಕ್ಷಗಾನ ಅಕಾಡೆಮಿ 2024ನೇ ಸಾಲಿನ ಯಕ್ಷಗಾನ ಪ್ರಶಸ್ತಿ ಪ್ರಕಟಿಸಿದ್ದು, ಜಿಲ್ಲೆಯ ಹಲವು ಹಿರಿಯ ಕಲಾವಿದರು ಈ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಅಕಾಡೆಮಿಯ ಪ್ರತಿಷ್ಠಿತ ಪಾರ್ತಿ ಸುಬ್ಬ ಪ್ರಶಸ್ತಿಗೆ ತೆಂಕು ತಿಟ್ಟಿನ ಹಿರಿಯ ಕಲಾವಿದ, ಖ್ಯಾತ ಹಿಮ್ಮೇಳಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ಒಂದು ಲಕ್ಷ ರೂ. ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.
ಅಕಾಡೆಮಿಯ ವಾರ್ಷಿಕ ಗೌರವ ಪ್ರಶಸ್ತಿಗೆ ಸುಬ್ರಾಯ ಹೊಳ್ಳ ಕಾಸರ ಗೋಡು ಜಿಲ್ಲೆಯಿಂದ ಆಯ್ಕೆಯಾಗಿದ್ದು, ಯಕ್ಷಸಿರಿ ಪ್ರಶಸ್ತಿಗೆ ಹಿರಿಯ ಅರ್ಥದಾರಿ ಅಡ್ಕ ಗೋಪಾಲಕೃಷ್ಣ ಭಟ್, ಮವ್ವಾರು ಬಾಲಕೃಷ್ಣ ಮಣಿಯಾಣಿ ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ. ಉಳಿದಂತೆ ಗೌರವ ಪ್ರಶಸ್ತಿಗೆ ಕೊಳ್ತಿಗೆ ನಾರಾಯಣ ಗೌಡ, ಕೋಡಿ ವಿಶ್ವನಾಥ ಗಾಣಿಗ, ಬಂಟ್ವಾಳ ರಾಘವದಾಸ್, ತುಮಕೂರು ಮೂಡಲಪಾಯ ಯಕ್ಷಗಾನ ಕಲಾವಿದ ಕಾಂತರಾಜು ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿ 50,000 ರೂ. ಮತ್ತು ಫಲಕ ಹೊಂದಿದೆ.
ಯಕ್ಷಸಿರಿ ಪ್ರಶಸ್ತಿಗೆ ಆಯ್ಕೆಯಾದ ಇತರರೆಂದರೆ ಉಡುಪಿ ಜಗನ್ನಾಥ ಆಚಾರ್ಯ, ಉಮೇಶ್ ಕುಪ್ಪೆಪದವು, ಶಿವಾನಂದ ಗೀಜಗಾರು, ಮುಗ್ವಾ ಗಣೇಶ್ ನಾಯ್ಕ್, ಸುರೇಂದ್ರ ಮಲ್ಲಿ, ಅಂಡಾಲ ದೇವಿಪ್ರಸಾದ್ ಶೆಟ್ಟಿ, ಬೆಂಗಳೂರು ಕೃಷ್ಣಪ್ಪ, ಚಿಕ್ಕಮಗಳೂರಿನ ಜ್ಯೋತಿಯಾಗಿದ್ದಾರೆ. ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ದತ್ತಿನಿಧಿ ಪ್ರಶಸ್ತಿಗೆ ಬಂಟ್ವಾಳ ಕರ್ಗಲ್ಲು ವಿಶ್ವೇಶ್ವರ ಭಟ್ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿ 25,000 ನಗದು ಮತ್ತು ಫಲಕ ಒಳಗೊಂಡಿದೆ. ಈ ತಿಂಗಳ 16ರಂದು ಉಡುಪಿ ಐವೈಸಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.