ಅರ್ತ್ ತಂತಿಯಿಂದ ಶಾಕ್ ತಗಲಿ ಮಗು ದಾರುಣ ಮೃತ್ಯು
ಮುಳ್ಳೇರಿಯ: ಮನೆಯ ಹೊರಗಿನ ಅರ್ತ್ ತಂತಿಯಿಂದ ಶಾಕ್ ತಗಲಿ ಮೂರೂವರೆ ವರ್ಷದ ಮಗು ಮೃತಪಟ್ಟ ದಾರುಣ ಘಟನೆ ಗಾಳಿಮುಖದಲ್ಲಿ ನಡೆದಿದೆ.ಗಾಳಿಮುಖ ನಿವಾಸಿ ಶಿನ್ಸಾದ್-ಅಪ್ಸಾನ ದಂಪತಿಯ ಪುತ್ರ ಮುಹಮ್ಮದ್ ಶಿನ್ಸಾದ್ ಮೃತಪಟ್ಟ ಮಗುವಾಗಿದೆ. ನಿನ್ನೆ ಸಂಜೆ ೪ ಗಂಟೆ ವೇಳೆ ಈ ಘಟನೆ ನಡೆದಿದೆ. ಮನೆಯ ಹೊರಗೆ ಆಟವಾಡುತ್ತಿದ್ದ ಮಗು ಅರ್ತ್ ತಂತಿಯನ್ನು ಸ್ಪರ್ಶಿಸಿದಾಗ ಅದರಿಂದ ಶಾಕ್ ತಗಲಿದೆ. ಅದನ್ನು ಕಂಡ ಮಗುವಿನ ಅಜ್ಜ ಮುಹಮ್ಮದ್ ಶಾಫಿ ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಮನೆಯ ವಿದ್ಯುತ್ ಸಂಪರ್ಕವನ್ನು ವಿಚ್ಛೇಧಿಸಿ ಮಗುವನ್ನು ರಕ್ಷಿಸಲೆತ್ನಿಸಿದರೂ ಅಷ್ಟರೊಳಗೆ ಗಂಭೀರ ಗಾಯಗೊಂಡ ಮಗು ಮೃತಪಟ್ಟಿದೆ.
ಮಗುವನ್ನು ರಕ್ಷಿಸಲೆತ್ನಿಸಿದಾಗ ಅಸ್ವಸ್ಥಗೊಂಡ ಮುಹಮ್ಮದ್ ಶಾಫಿಯನ್ನು ಚೆರ್ಕಳದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮಗುವಿನ ಮೃತದೇಹದ ಮರಣೋತ್ತರ ಪರೀಕ್ಷೆ ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ನಡೆಸಲಾಯಿತು.
ಜನವರಿ ೪ರಂದು ಶಿನ್ಸಾದ್‌ರ ಮನೆಯಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದ್ದು, ಅದರ ಸಿದ್ಧತೆ ನಡೆಸುತ್ತಿದ್ದಂತೆ ಶಾಕ್ ತಗಲಿ ಮಗು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.