ಅವೈಜ್ಞಾನಿಕ ರಸ್ತೆ ನಿರ್ಮಾಣ: ಊಟಕ್ಕಿಲ್ಲದ ಉಪ್ಪಿನಕಾಯಿ ಎಂದು ಸ್ಥಳೀಯರು ರೋಷ
ಮಂಜೇಶ್ವರ: ಬ್ಲೋಕ್ ಪಂಚಾಯತ್ನಿಂದ ಮಂಜೂರಾದ 5 ಲಕ್ಷ ರೂ. ವ್ಯಯಿಸಿ 88 ಮೀಟರ್ ರಸ್ತೆಯನ್ನು ಕಾಂಕ್ರಿಟೀಕರ ಣಗೊಳಿಸಲಾಗಿದ್ದು, ಆದರೆ ಇದು ಈಗ ಊಟಕ್ಕಿಲ್ಲದ ಉಪ್ಪಿನಕಾಯಿ ಯಂತಾಗಿದೆ ಎಂದು ಸ್ಥಳೀಯರು ರೋಷ ವ್ಯಕ್ತಪಡಿಸಿದ್ದಾರೆ. ಮಂಜೇಶ್ವರ ರೈಲ್ವೇ ನಿಲ್ದಾಣ ರಸ್ತೆಗೆ ೮೮ ಮೀಟರ್ ಕಾಂಕ್ರೀಟ್ ಹಾಕಲಾಗಿತ್ತು. ಆದರೆ ಬದಿಯಲ್ಲಿ ಚರಂಡಿ ನಿರ್ಮಿಸದೆ ರಸ್ತೆಯನ್ನು ಅಗಲ ಕಡಿಮೆ ಮಾಡಿ ಎತ್ತರಗೊಳಿಸಿ ನಿರ್ಮಿಸಿರುವುದು ಸಂಚಾರಕ್ಕೆ ಸಮಸ್ಯೆ ಸೃಷ್ಟಿಸಿದೆ ಎಂದು ಸ್ಥಳೀಯರು ದೂರಿದ್ದಾರೆ. ರಸ್ತೆ ನಿರ್ಮಾಣದ ಇಂಜಿನಿಯರ್ನ ಅವೈಜ್ಞಾನಿಕ ಎಸ್ಟಿಮೇಟ್ ಇದಕ್ಕೆ ಕಾರಣವಾಗಿದ್ದು, ಇಂಜಿನಿಯರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ದಿನನಿತ್ಯ ವಿದ್ಯಾರ್ಥಿಗಳು, ವ್ಯಾಪಾರಿಗಳು ಹಾಗೂ ನೂರಾರು ಮಂದಿ ಪ್ರಯಾಣಿಕರು ಈ ರಸ್ತೆಯನ್ನು ಆಶ್ರಯಿಸುತ್ತಿದ್ದು, ಇದರ ಅವೈಜ್ಞಾನಿಕ ನಿರ್ಮಾಣದಿಂದಾಗಿ ಸಮಸ್ಯೆ ಉಂಟಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಈ ಸ್ಥಳಕ್ಕೆ ಸಿಪಿಎಂ ಹಿರಿಯ ಮುಖಂಡ ಕೆ.ಆರ್. ಜಯಾನಂದ ಭೇಟಿ ನೀಡಿ ಅವೈಜ್ಞಾನಿಕ ಕಾಮಗಾರಿ ನಡೆಸಲು ಹಸಿರು ನಿಶಾನೆ ನೀಡಿದ ಇಂಜಿನಿಯರ್ ವಿರುದ್ಧ ಕಠಿಣ ಕ್ರಮ ಕೈಗೊಂಡು ಕರ್ತವ್ಯದಿಂದ ಅಮಾನತುಗೊಳಿಸುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ ವಿಜಿಲೆನ್ಸ್ಗೆ ದೂರು ನೀಡುವುದಾಗಿಯೂ ತಿಳಿಸಿದ್ದಾರೆ. ಇವರ ಜೊತೆಯಲ್ಲಿ ಮುಖಂಡರಾದ ಅಶ್ರಫ್ ಕುಂಜತ್ತೂರು, ಕಮಲಾಕ್ಷ ಕೆ, ಕರುಣಾಕರ ಶೆಟ್ಟಿ, ಫಾರೂಕ್ ಉಸ್ಮಾನ್ ಉಪಸ್ಥಿತರಿದ್ದರು.