ಉಪ್ಪಳ ಬಸ್ ನಿಲ್ದಾಣದಲ್ಲಿ ತ್ಯಾಜ್ಯ ರಾಶಿ, ದುರ್ವಾಸನೆ
ಉಪ್ಪಳ: ಮಂಗಲ್ಪಾಡಿ ಪಂಚಾಯತ್ನ ಉಪ್ಪಳ ಬಸ್ ನಿಲ್ದಾಣದಲ್ಲಿ ತ್ಯಾಜ್ಯ ರಾಶಿ ಬಿದ್ದಿದ್ದು, ದುರ್ವಾಸನೆಯಿಂದ ಸಮಸ್ಯೆ ಉಂಟಾಗಿದೆ ಎಂದು ದೂರಲಾಗಿದೆ. ಕಳೆದ ಹಲವು ತಿಂಗಳುಗಳಿಂದ ಬಸ್ ನಿಲ್ದಾಣದ ಶೌಚಾಲಯ ಪರಿಸರದಲ್ಲಿ ರಾಶಿ ಬಿದ್ದ ತ್ಯಾಜ್ಯದೊಂದಿಗೆ ಮಲಿನ ನೀರು ಸೇರಿಕೊಂಡು ದುರ್ವಾಸನೆ ಸಹಿಸಲಸಾಧ್ಯವಾದ ಸ್ಥಿತಿಗೆ ತಲುಪಿದೆ ಎಂದು ವ್ಯಾಪಾರಿಗಳು ಹಾಗೂ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ದೂರುತ್ತಾರೆ.
ಬಸ್ ನಿಲ್ದಾಣ ಹಾಗೂ ಪರಿಸರದಲ್ಲೆಲ್ಲ ಪ್ಲಾಸ್ಟಿಕ್ ಸಹಿತದ ವಿವಿಧ ರೀತಿಯ ತ್ಯಾಜ್ಯಗಳು ಕಂಡು ಬರುತ್ತಿದ್ದರೂ ಅಧಿಕಾರಿಗಳು ಶುಚಿಗೊಳಿಸಲು ಮುಂದಾಗದಿರುವುದು ಸ್ಥಳೀಯರಲ್ಲಿ ರೋಷಕ್ಕೆ ಕಾರಣ ವಾಗಿದೆ. ಕೆಲವೊಮ್ಮೆ ಶುಚಿಗೊಳಿಸಿ ದರೂ ರಾತ್ರಿ ಸಮಯ ದಲ್ಲಿ ವಿವಿಧ ಕಡೆಗಳಿಂದ ತ್ಯಾಜ್ಯವನ್ನು ತಂದು ಇಲ್ಲಿ ಎಸೆಯುತ್ತಿರುವುದಾಗಿಯೂ ಹೇಳಲಾಗುತ್ತಿದೆ.
ಆರೋಗ್ಯ ಇಲಾಖೆ, ಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಶುಚಿಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ತೀರ್ಮಾ ನಿಸಿರುವುದಾಗಿ ತಿಳಿದು ಬಂದಿದ್ದರೂ ಇದುವರೆಗೂ ಯಾವುದೇ ಕ್ರಮ ಉಂಟಾಗಲಿಲ್ಲವೆಂದು ಸ್ಥಳೀಯರು ತಿಳಿಸುತ್ತಾರೆ. ದುರ್ವಾಸನೆ ಹಾಗೂ ಮಲಿನ ಜಲದಿಂದ ಸಾಂಕ್ರಾಮಿಕ ರೋಗ ಹರಡುವ ಮೊದಲು ಶುಚೀಕರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.