ಎಂಡೋಸಲ್ಫಾನ್ ಸಂತ್ರಸ್ತರ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡುವಂತೆ ಹೈಕೋರ್ಟ್ ನಿರ್ದೇಶ
ಕಾಸರಗೋಡು: ಕಾಸರಗೋಡು ಜಿಲ್ಲೆಯ ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ನಿರ್ಮಿಸಲಾಗಿರುವ ಮನೆಗಳಿಗೆ ಶೀಘ್ರ ವಿದ್ಯುತ್ ಸಂಪರ್ಕ ಒದಗಿಸಲು ಅಗತ್ಯದ ಕ್ರಮ ಕೈಗೊಳ್ಳುವಂತೆ ರಾಜ್ಯ ಹೈಕೋರ್ಟ್ ಕಾಸರಗೋಡು ಜಿಲ್ಲಾಧಿಕಾರಿಗೆ ನಿರ್ದೇಶ ನೀಡಿದೆ.
ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿಗಾಗಿ ತಾವು ನಿರ್ಮಿಸಿರುವ ಮನೆಗಳಿಗೆ ವಿದ್ಯುತ್ ಮತ್ತು ನೀರಿನ ಸಂಪರ್ಕ ನೀಡಲಾಗಿಲ್ಲವೆಂದು ಸತ್ಯಸಾಯಿ ಆರ್ಫನೇಜ್ ಟ್ರಸ್ಟ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಅದನ್ನು ಪರಿಶೀಲಿಸಿದ ಹೈಕೋರ್ಟ್ನ ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅವರು ಕೊನೆಗೆ ಈ ನಿರ್ದೇಶ ನೀಡಿದ್ದಾರೆ.
ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ನಿರ್ಮಿಸಲಾಗಿರುವ ಮನೆಗಳನ್ನು ಸಕಾಲದಲ್ಲಿ ಅವರಿಗೆ ಹಸ್ತಾಂತರಿಸದ ಕಾರಣ ಆ ಮನೆಗಳು ಈಗ ದುರಸ್ತಿ ಬೀಳತೊಡಗಿದೆ. ಅದನ್ನು ನವೀಕರಿಸಲು ಇನ್ನೂ ೨೪ ಲಕ್ಷ ರೂ.ಗಳ ಅಗತ್ಯವಿದೆ. ಈ ವಿಷಯದಲ್ಲಿ ಅಗತ್ಯದ ಕ್ರಮ ಕೈಗೊಳ್ಳಬೇಕೆಂದೂ ಹೈಕೋರ್ಟ್ಗೆ ಸಲ್ಲಿಸಿದ ಅರ್ಜಿಯಲ್ಲಿ ಸತ್ಯಸಾಯಿ ಆರ್ಫನೇಜ್ನ ಟ್ರಸ್ಟ್ ವಿನಂತಿಸಿಕೊಂಡಿದೆ.
ಈ ಮನೆಗಳನ್ನು ಶುಚೀಕರಿಸಲು ಅಗತ್ಯದ ಕ್ರಮ ಆರಂಭಿಸಲಾಗಿದೆ ಎಂದು ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಈ ಅರ್ಜಿಯನ್ನು ಹೈಕೋರ್ಟ್ ಪರಿಶೀಲಿಸುತ್ತಿದ್ದ ವೇಳೆ ಕಾಸರಗೋಡು ಜಿಲ್ಲಾಧಿಕಾರಿಯವರು ಆನ್ಲೈನ್ ಮೂಲಕ ಹಾಜರಾಗಿದ್ದರು. ಈ ಅರ್ಜಿಯ ಮುಂದಿನ ಹಂತದ ವಿಚಾರಣೆಯನ್ನು ಹೈಕೋರ್ಟ್ ಬಳಿಕ ಅಕ್ಟೋಬರ್ ೧೬ಕ್ಕೆ ಮುಂದೂಡಿದೆ.
ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ಸತ್ಯಸಾಯಿ ಆರ್ಫನೇಜ್ ಒಟ್ಟು ೩೬ ಮನೆಗಳನ್ನು ನಿರ್ಮಿಸಿದೆ. ಅವುಗಳನ್ನು ಅಕ್ಟೋಬರ್ ೧೫ರೊಳಗಾಗಿ ಸಂತ್ರಸ್ತರಿಗೆ ಹಸ್ತಾಂತರಿಸುವಂತೆ ಹೈಕೋರ್ಟ್ ಈ ಹಿಂದೆಯೇ ನಿರ್ದೇಶ ನೀಡಿತ್ತು.