‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆ ಸೋಮವಾರ ಲೋಕಸಭೆಯಲ್ಲಿ ಮಂಡನೆ
ನವದೆಹಲಿ: ‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆಯನ್ನು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಅರ್ಚುನ್ರಾಮ್ ಮೇಘಾವಾಲ್ ಅವರು ಸೋಮವಾರದಂದು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ಈ ಮಸೂದೆಯು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕ ಕಾಲದಲ್ಲಿ ಚುನಾವಣೆ ನಡೆಸಲು ಅನುಕೂಲ ಮಾಡಿಕೊಡಲಿದೆ.
ಈ ಮಸೂದೆಯು ನೂರು ದಿನಗಳಲ್ಲಿ ದೇಶಾದ್ಯಂತ ಲೋಕಸಭೆ, ವಿಧಾನಸಭೆ, ನಗರಸಭೆಗಳು ಮತ್ತು ಪಂಚಾಯತ್ ಚುನಾವಣೆಗಳನ್ನು ಸಮನ್ವಯಗೊಳಿಸುವ ಗುರಿಯನ್ನು ಹೊಂದಿದೆ. ಇದು ಮಾಜಿ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಯ ಶಿಫಾರಸುಗಳಾಗಿದೆ. ಇದರ ಹೊರತಾಗಿ ಕೇಂದ್ರಾಡಳಿತ ಪ್ರದೇಶದ ಸರಕಾರಿ ಕಾಯ್ದೆ -1963, ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ ಕಾಯ್ದೆ- 1991 ಮತ್ತು ಜಮ್ಮು ಮತ್ತು ಕಾಶ್ಮೀರ ಕಾಯ್ದೆ- 2019 ವನ್ನು ತಿದ್ದುಪಡಿ ಮಾಡಲು ಕೇಂದ್ರ ಸಚಿವ ಮೇಘಾವಾಲ್ ಪ್ರತ್ಯೇಕ ಮಸೂದೆಯನ್ನು ಇದೇ ಸಂದರ್ಭದಲ್ಲಿ ಲೋಕಸಭೆಯಲ್ಲಿ ಮಂಡಿಸಲಿದ್ದಾರೆ.
ಈ ಮಸೂದೆ ಭಾರತದ ಪ್ರಜಾಪ್ರಭುತ್ವವನ್ನು ಬಲಪಡಿಸುವ ಮಹತ್ವದ ಹೆಜ್ಜೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಏಕ ಕಾಲದಲ್ಲ್ಲಿ ಚುನಾವಣೆಗಳು ಸಮಯ ಮತ್ತು ಸಂಪನ್ಮೂಲಗಳನ್ನು ಉಳಿಸುತ್ತದೆ. ಮತ್ತು ಆಡಳಿತ ಯಂತ್ರದ ಮೇಲಿನ ಹೊರೆಯನ್ನು ಕಡಿಮೆ ಮಾಡಲಿದೆ ಎಂದು ಇನ್ನೊಂದೆಡೆ ಕೇಂದ್ರ ಸರಕಾರ ಪ್ರತಿಪಾಧಿಸುತ್ತಿದೆ.
ಒಂದು ರಾಷ್ಟ್ರ ಒಂದು ಚುನಾವಣೆ ಕುರಿತ ಸಮಾಲೋಚನೆ ಪ್ರಕ್ರಿಯೆಯಲ್ಲಿ 32 ರಾಜಕೀಯ ಪಕ್ಷಗಳು ಬೆಂಬಲಿಸಿವೆ ಮತ್ತು 15 ಪಕ್ಷಗಳು ಬೆಂಬಲಿಸಿರಲಿಲ್ಲವೆಂದು ಮಾಜಿ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಹೇಳಿದ್ದಾರೆ. ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕ ಕಾಲದಲ್ಲಿ ಚುನಾವಣೆ ನಡೆಸುವ ಪರಿಕಲ್ಪನೆಯು ದೇಶದ ಸ್ಥಾಪಕ ಪಿತಾಮಹರ ಕನಸಿನ ಕೂಸೇ ಆಗಿದೆ ಹೊರತು ಬಿಜೆಪಿಯದ್ದಲ್ಲ ಎಂದೂ ಅವರು ಹೇಳಿದ್ದಾರೆ.
1967ರ ತನಕ ದೇಶದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆದಿದ್ದುವು ಎಂದು ಬಿಜೆಪಿ ಹೇಳಿದೆ. ಆದರೆ ಏಕಕಾಲ ಚುನಾವಣೆ ಪ್ರಸ್ತಾಪ ಪ್ರಜಾಪ್ರಭುತ್ವವನ್ನು ದುರ್ಬಲ ಗೊಳಿಸಲಿದೆ ಮತ್ತು ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸುತ್ತಿದೆ ಎಂಬುವುದು ವಿರೋಧ ಪಕ್ಷಗಳ ವಾದವಾಗಿದೆ.