ಓಣಂ ಹಬ್ಬ ಸ್ವಾಗತಿಸಲು ನಾಡು, ನಗರ ಸಿದ್ಧ
ನಾಳೆ ತಿರುವೋಣಂ. ಓಣಂ ಹಬ್ಬವನ್ನು ಸ್ವಾಗತಿಸಲು ಕೇರಳೀಯರು ಸಿದ್ಧತೆಯಲ್ಲಿದ್ದಾರೆ. ಮನೆಯಂಗಳದಲ್ಲಿ ಹೂರಂಗೋಲಿ ಸಿದ್ಧಪಡಿಸಲು ಹೂ, ಓಣಂ ಔತಣಕ್ಕಾಗಿ ಸಾಮಗ್ರಿಗಳು, ಹೊಸ ಬಟ್ಟೆಬರೆಗಳ ಖರೀದಿಗಾಗಿ ಜನರು ಈಗಾಗಲೇ ಆರಂಭಿಸಿದ್ದು, ಇಂದು ಅದು ಪಾರಮ್ಯಕ್ಕೇರಲಿದೆ. ಈಗಾಗಲೇ ಪೇಟೆಗಳಲ್ಲಿ ಜನಸಂದಣಿ ಕಂಡು ಬರುತ್ತಿದ್ದು, ತರಕಾರಿ ಅಂಗಡಿ, ಬಟ್ಟೆಬರೆ ಅಂಗಡಿ, ದಿನಸಿ ಅಂಗಡಿಗಳಲ್ಲಿ ಜನರು ಖರೀದಿಗಾಗಿ ತಲುಪುತ್ತಿದ್ದಾರೆ. ಕಾಞಂಗಾಡ್, ಕಾಸರಗೋಡು ನಗರಗಳಲ್ಲಿ ಭಾರೀ ಸಂದಣಿ ಕಂಡು ಬರುತ್ತಿದೆ. ಈ ಮಧ್ಯೆ ಮಳೆ ಸುರಿದು ಜನಸಂಚಾರಕ್ಕೆ ಅಲ್ಪ ಸಮಸ್ಯೆ ಸೃಷ್ಟಿಸಿದರೂ ಬಿಸಿಲು ಬಂದರೆ ಮತ್ತೆ ಜನರ ಓಡಾಟ ಹೆಚ್ಚಾಗಲಿದೆ. ವಿವಿಧ ರಾಜ್ಯಗಳಿಂದ ತಲುಪಿದ ಹೂ ಮಾರಾಟ ಭರದಿಂದ ನಡೆಯುತ್ತಿದೆ. ಆನ್‌ಲೈನ್ ಮೂಲಕವೂ ಈಗ ಹೂಗಳು ಲಭ್ಯವಿದ್ದು, ಆ ಮೂಲಕವೂ ಖರೀದಿ ನಡೆಯುತ್ತಿದೆ.
ನಿನ್ನೆ ಮಾವೇಲಿ ಸ್ಟೋರ್, ಸಪ್ಲೈಕೋ, ಸೂಪರ್ ಮಾರ್ಕೆಟ್ ಗಳಲ್ಲೂ ಭಾರೀ ಜನಸಂದಣಿ ಕಂಡು ಬಂದಿದೆ. ಪೇಟೆಗೆ ತಲುಪುವ ವಾಹನ, ಜನರ ಹೆಚ್ಚಳದಿಂದಾಗಿ ಸಂಚಾರ ತಡೆಯೂ ಸೃಷ್ಟಿಯಾಗಿದೆ. ಓಣಂ ಔತಣಕ್ಕಾಗಿ ವಿವಿಧ ಕ್ಯಾಟರಿಂಗ್ ಸಂಸ್ಥೆಗಳು ಪ್ರತ್ಯೇಕ ವ್ಯವಸ್ಥೆಯನ್ನು ಕೈಗೊಂಡಿದ್ದು, ಇವರಿಗೂ ಈಗ ವ್ಯಾಪಾರ ಭರಾಟೆ ಕಂಡು ಬರುತ್ತಿದೆ.
ಹೊಟೇಲ್‌ಗಳು ಕೂಡಾ ಓಣಂ ಔತಣಕ್ಕೆ ಪ್ರತ್ಯೇಕ ಪ್ಯಾಕೇಜ್ ಏರ್ಪಡಿಸುತ್ತಿವೆ. ಉತ್ರಾಡಂ, ಓಣಂ ದಿನದಂದು ಓಣಂ ಔತಣಕ್ಕಾಗಿ ಈಗಾಗಲೇ ಮುಂಗಡ ಬುಕ್ಕಿಂಗ್ ನಡೆಸಲಾಗಿದೆ. ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಹೆಚ್ಚಿನ ಗಮನ ಹರಿಸುತ್ತಿದ್ದಾರೆ.