ಕನ್ನಡ, ತುಳು ಕಾಸರಗೋಡಿನ ಭಾವೈಕ್ಯದ ಪ್ರತೀಕ-ಪ್ರೊ. ಪಿ.ಎನ್. ಮೂಡಿತ್ತಾಯ
ಧರ್ಮತ್ತಡ್ಕ: ಕನ್ನಡ ತುಳು ಭಾಷೆಗಳು ಕಾಸರಗೋಡಿನ ಸಂಸ್ಕೃತಿಯ ವಾಹಕಗಳು. ಇವು ಒಂದನ್ನೊಂದು ಬಿಟ್ಟಿಲ್ಲ. ಕನ್ನಡ, ತುಳು ಯಕ್ಷಗಾನಗಳು ಇಲ್ಲಿನ ಭಾಷಾ ಬಾಂಧವ್ಯವನ್ನು ಗಟ್ಟಿಗೊಳಿಸಿದೆ ಯೆಂದು ನಿವೃತ್ತ ಪ್ರಾಂಶುಪಾಲ, ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷ ಪ್ರೊ. ಪಿ.ಎನ್. ಮೂಡಿತ್ತಾಯ ನುಡಿದರು. ಅವರು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಗುಮ್ಮಣ್ಣ ಶೆಟ್ಟಿ ಜೈನ್ ದತ್ತಿ ಉಪನ್ಯಾಸ ಕಾರ್ಯ ಕ್ರಮದಲ್ಲಿ ಕನ್ನಡ ತುಳು ಭಾಷಾ ಬಾಂಧವ್ಯ ಎಂಬ ವಿಷಯದಲ್ಲಿ ಮಾತನಾಡುತ್ತಿದ್ದರು. ಭಾಷೆಗಳು ಭಾವೈಕ್ಯದ ಪ್ರತೀಕ ಎಂದ ಅವರು ಕನಸರಗೋಡಿನ ಜನತೆ ತುಳು ಮತ್ತು ಕನ್ನಡವನ್ನು ಸೋದರ ಭಾವದಿಂದ ಕಂಡಿದ್ದು, ಎರಡೂ ಭಾಷೆಗಳು ಪರಸ್ಪರ ಪೂರಕ ಎಂದರು. ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ| ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅಧಕ್ಷತೆ ವಹಿಸಿದರು. ಕ್ಯಾಂಪ್ಕೋ ಮಾಜಿ ಉಪಾಧ್ಯಕ್ಷ ಸತೀಶ್ಚಂದ್ರ ಭಂಡಾರಿ ಕೋಳಾರು, ಪ್ರಾಂಶುಪಾಲ ರಾಮಚದ್ರ ಭಟ್ ಎನ್, ನಿವೃತ್ತ ಪ್ರಾಂಶುಪಾಲ ಡಾ. ಕೆ. ಕಮಲಾಕ್ಷ ಮುಖ್ಯ ಅತಿಥಿಗಳಾಗಿ ದ್ದರು. ಕ.ಸಾ.ಪ ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು, ಕನ್ನಡ ತುಳು ಭಾವಗಾಯನ ನಡೆಸಿದರು. ಕಸಾಪ ಸಂಘಟನಾ ಕಾರ್ಯದರ್ಶಿಗಳಾದ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿ, ಪಿ.ರಾಮಚಂದ್ರ ಭಟ್ ಧರ್ಮತ್ತಡ್ಕ ವಂದಿಸಿದರು. ಉಪನ್ಯಾಸಕ ಸತೀಶ್ ಕುಮಾರ್ ಶೆಟ್ಟಿ ಒಡ್ಡಂಬೆಟ್ಟು ನಿರೂಪಿಸಿದರು.