ಕಾಂಗ್ರೆಸ್ ಹಿರಿಯ ನೇತಾರ ಮಾಜಿ ಶಾಸಕ ಕೆ.ಪಿ. ಕುಂಞಿಕಣ್ಣನ್ ನಿಧನ

ಕಾಸರಗೋಡು: ಮಾಜಿ ಶಾಸಕ ಹಾಗೂ ಕಾಂಗ್ರೆಸ್‌ನ ಹಿರಿಯ ನೇತಾ ರರೂ ಆಗಿರುವ ಕೆ.ಪಿ. ಕುಂಞಿಕಣ್ಣನ್ (76) ನಿಧನ ಹೊಂದಿದರು. ಕಣ್ಣೂರು ಕಿಮ್ಸ್ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆಯ ಲ್ಲಿದ್ದರು. ಅದು ಫಲಕಾರಿಯಾಗದೆ ಇಂದು ಬೆಳಿಗ್ಗೆ ಅವರು ನಿಧನ ಹೊಂದಿದರು.

1949 ಸೆಪ್ಟಂಬರ್ 9ರಂದು ಪಯ್ಯನ್ನೂರು ಕೈದಪ್ರಂ ಕುಂಞಂಬು ಪುದುವಾಳ್- ಕಡವತ್ ಪುತ್ತಲತ್ ಕುಂಞ್ಞದ ಅಮ್ಮ ದಂಪತಿ ಪುತ್ರನಾಗಿ ಜನಿಸಿದ ಕೆ.ಪಿ. ಕುಂಞಿಕಣ್ಣನ್ ಪಯ್ಯ ನ್ನೂರು ಕಾರಮೇಲಿಲ್ ಪ್ರಿಯದರ್ಶಿನಿ ಮನೆಯಲ್ಲಿ ಇವರು ವಾಸಿಸುತ್ತಿದ್ದರು.

ಕಾಂಗ್ರೆಸ್‌ನ ಕೇರಳ ಘಟಕದ ಪ್ರಧಾನ ಕಾರ್ಯದರ್ಶಿಯಾಗಿಯೂ ಇವರು ದೀರ್ಘಕಾಲ ಸೇವೆ ಸಲ್ಲಿಸಿದ್ದರು. ಹುಟ್ಟಿದ್ದು ಕಣ್ಣೂರು ಜಿಲ್ಲೆಯಲ್ಲಾದರೂ ಇವರು ಕಾರ್ಯನಿರ್ವಹಣಾ ಕ್ಷೇತ್ರ ಕಾಸರಗೋಡು ಜಿಲ್ಲೆಯಾಗಿತ್ತು. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವಲ್ಲಿ ಇವರು ನಿರ್ಣಾಯಕ ಪಾತ್ರ ವಹಿಸಿದ್ದರು. ಇವರು ದೀರ್ಘಕಾಲ ಕಾಂಗ್ರೆಸ್‌ನ ಕಾಸರಗೋಡು ಜಿಲ್ಲಾ ಅಧ್ಯಕ್ಷರೂ ಆಗಿ ಸೇವೆ ಸಲ್ಲಿಸಿದ್ದರು. ಮಾಜಿ ಮುಖ್ಯಮಂತ್ರಿ ದಿ| ಕೆ. ಕರುಣಾಕರನ್‌ರ ಆಪ್ತರೂ ಆಗಿದ್ದರು. 1987ರಲ್ಲಿ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕೆ.ಪಿ. ಕುಂಞಿಕಣ್ಣನ್ ಉದುಮ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ  ತನ್ನ ನಿಕಟ ಎದುರಾಳಿ ಸಿಪಿಎಂನ ಕೆ. ಪುರುಷೋತ್ತಮನ್‌ರನ್ನು 7845 ಮತಗಳ ಅಂತರದಲ್ಲಿ ಪರಾಭವಗೊಳಿಸಿ  ಮೊದಲ ಬಾರಿಗೆ  ವಿಧಾನಸಭಾ ಸದಸ್ಯರಾಗಿ ಆಯ್ಕೆಗೊಂಡಿದ್ದರು.

ಆ ಬಳಿಕ 1991ರಲ್ಲಿ ಮತ್ತು 1996ರಲ್ಲಿ ನಡೆದ  ಚುನಾವಣೆಯಲ್ಲಿ ಇವರು ಇದೇ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಎಡರಂಗದ ಪಿ. ರಾಘವನ್‌ರ ವಿರುದ್ಧ ಪರಾಜಯಗೊಂಡಿದ್ದರು.  2016ರಲ್ಲಿ ಕೆ.ಪಿ. ಕುಂಞಿ ಕಣ್ಣನ್ ತೃಕ್ಕರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸಿಪಿಎಂ ಉಮೇದ್ವಾರ ಎಂ. ರಾಜಗೋಪಾಲನ್‌ರ ವಿರುದ್ಧ ಪರಾಜಯಗೊಂ ಡಿದ್ದರು. ಕೇರಾಫೆಡ್ ಅಧ್ಯಕ್ಷ, ರಾಜ್ಯ ವಿದ್ಯುನ್ಮಂಡಳಿ ಸದಸ್ಯ, ಫಾರ್ಮಾ ಕ್ಯೂಟಿಕಲ್ ಕಾರ್ಪರೇಷನ್ ನಿರ್ದೇಶಕ ಹಾಗೂ ಪಯ್ಯನ್ನೂರು ಕಾಲೇಜು ಮ್ಯಾನೇಜಿಂಗ್ ಸಮಿತಿ ಉಪಾಧ್ಯಕ್ಷರಾಗಿಯೂ ಇವರು ಸೇವೆ ಸಲ್ಲಿಸಿದ್ದರು. ೨೦೦೫ ಮೇ ೧ರಂದು  ಮಾಜಿ ಮುಖ್ಯಮಂತ್ರಿ ಕೆ. ಕರುಣಾಕರನ್‌ರ ನೇತೃತ್ವದಲ್ಲಿ ಕಾಂಗ್ರೆಸ್ ಬಿಟ್ಟು ಡಿಐಸಿ ಎಂಬ ಹೊಸ ರಾಜಕೀಯ ಪಕ್ಷ ರೂಪೀಕರಿಸಿದಾಗ ಕುಂಞಿಕಣ್ಣನ್ ಕೂಡಾ ಆ ಪಕ್ಷ ಸೇರಿದ್ದರು. ನಂತರ ಅವರು ಮಾತೃಪಕ್ಷವಾದ ಕಾಂಗ್ರೆಸ್‌ಗೆ ಮತ್ತೆ ಮರಳಿದ್ದರು.

ಸೆ.4ರಂದು ಅಪರಾಹ್ನ  ನೀಲೇಶ್ವರ ಕರುವಾಚ್ಚೇರಿ ಪೆಟ್ರೋಲ್ ಬಂಕ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂಞಿಕಣ್ಣನ್ ಪ್ರಯಾಣಿಸುತ್ತಿದ್ದ ಕಾರು ಡಿವೈಡರ್‌ಗೆ ಢಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಅವರು ಗಂಭೀರ ಗಾಯಗೊಂಡು ಕಣ್ಣೂರು ಕಿಮ್ಸ್ ಆಸ್ಪತ್ರೆಗೆ ಸಾಗಿಸಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಬೆಳಿಗ್ಗೆ ನಿಧನ ಹೊಂದಿದರು. ಮೃತರು ಕೆ. ಸುಶೀಲ ಪತ್ನಿ (ನಿವೃತ್ತ ಪ್ರಾಧ್ಯಾಪಿಕೆ), ಮಕ್ಕಳಾದ ಕೆ.ಪಿ. ಕೆ. ತಿಲಕನ್ (ರಾಜ್ಯ ವಿಪಕ್ಷ ನಾಯಕರ ಖಾಸಗಿ ಕಾರ್ಯದರ್ಶಿ), ಕೆ.ಪಿ.ಕೆ. ತುಳಸಿ (ಅಧ್ಯಾಪಿಕೆ), ಸೊಸೆ ನ್ಯಾಯವಾದಿ ವೀಣಾ ಎಸ್. ನಾಯರ್ (ಯೂತ್ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ), ಅಳಿಯ ಪ್ರತೀಶ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಕುಂಞಿಕಣ್ಣನ್‌ರ ನಿಧನಕ್ಕೆ ಕಾಂಗ್ರೆಸ್ ನೇತಾರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page