ಕಾಡು ಹಂದಿ ಉಪಟಳ: ಜಿಲ್ಲೆಯಲ್ಲಿ 1071 ಮಂದಿಗೆ ಬಂದೂಕು ಲೈಸನ್ಸ್: ಗುಂಡಿಕ್ಕುವ ಎಂ. ಪ್ಯಾನಲ್‌ನಲ್ಲಿ ಹೆಸರು ನೋಂದಾಯಿಸಿದ್ದು 33 ಮಂದಿ ಮಾತ್ರ
ಕಾಸರಗೋಡು: ಉಪಟಳಕಾರಿ ಕಾಡುಹಂದಿಗಳನ್ನು ಗುಂಡಿಕ್ಕಿ ಕೊಲ್ಲಲು ಅರಣ್ಯ ಇಲಾಖೆಯ ಅನುಮತಿ ಇದ್ದರೂ ಜಿಲ್ಲೆಯಲ್ಲಿ ಬಂದೂಕು ಲೈಸನ್ಸ್ ಹೊಂದಿರುವ ಹೆಚ್ಚಿನವರು ಅದಕ್ಕೆ ತಯಾರಾಗುತ್ತಿಲ್ಲ.
ಜಿಲ್ಲೆಯಲ್ಲಿ ಒಟ್ಟು1071 ಮಂದಿ ಬಂದೂಕು ಲೈಸನ್ಸ್ ಹೊಂದಿದ್ದಾರೆ. ಈ ಪೈಕಿ ಕೇವಲ 33 ಮಂದಿ ಮಾತ್ರವೇ ಅರಣ್ಯ ಇಲಾಖೆಯ ಎಂ. ಪ್ಯಾನಲ್‌ನಲ್ಲಿ ಹೆಸರು ನೋಂದಾ ಯಿಸಿದ್ದಾರೆ. ಜಿಲ್ಲಾಡಳಿತೆಯ ಲೆಕ್ಕಾಚಾರ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 1071 ಮಂದಿ ಬಂದೂಕು ಲೈಸನ್ಸ್ ಹೊಂದಿದ್ದು, ಅದರಲ್ಲ್ಲಿ 946 ಮಂದಿ ತಮ್ಮ ಬಂದೂಕು ಲೈಸನ್ಸ್ ನವೀಕರಿಸಿದ್ದಾರೆ. ಬಾಕಿ ಉಳಿದವರ ಲೈಸನ್ಸ್ ನವೀಕರಣೆ ಅರ್ಜಿಗಳು ಈಗ ಅಧಿಕೃತರ ಪರಿಶೀಲನೆಯಲ್ಲ್ಲಿದೆ. ಹೀಗೆ ಲೈಸನ್ಸ್ ಪಡೆದವರಲ್ಲಿ ಶೇ. 90ರಷ್ಟು ಮಂದಿ ತಮ್ಮ ಕೃಷಿ ಸಂರಕ್ಷಣೆಗಾಗಿ ಬಂದೂಕು ಲೈಸನ್ಸ್ ಪಡೆದವರಾಗಿದ್ದಾರೆ. ಇವರು ಅರಣ್ಯ ಇಲಾಖೆಯ ಎಂ. ಪ್ಯಾನೆಲ್‌ನಲ್ಲಿ ಹೆಸರು ನೋಂದಾಯಿಸಿದಲ್ಲಿ ಅವರು ತಮ್ಮ ಕೃಷಿ ತೋಟಗಳಿಗೆ ನುಗ್ಗಿ ಹಾನಿಗೊಳಿಸುವ ಕಾಡು ಹಂದಿಗಳನ್ನು ಗುಂಡಿಕ್ಕಿ ಕೊಲ್ಲಬಹುದಾಗಿದೆ. ಆದರೆ ಇದರಲ್ಲ್ಲಿ ಹೆಚ್ಚನವರು ತಮ್ಮ ಹೆಸರನ್ನು ಎಂ. ಪ್ಯಾನಲ್‌ನಲ್ಲಿ ಸೇರ್ಪಡೆಗೊಳಿಸಿಲ್ಲ.
ರಾಜ್ಯದಲ್ಲಿ ಕಾಡು ಹಂದಿಗಳು ಅತೀ ಹೆಚ್ಚು ಉಪಟಳ ಹೊಂದಿರುವ ಜಿಲ್ಲೆಯಾಗಿದೆ ಕಾಸರಗೋಡು. ಅರಣ್ಯ ಇಲಾಖೆಯ ಲೆಕ್ಕಾಚಾರ ಪ್ರಕಾರ ಜಿಲ್ಲೆಯಲ್ಲಿ 21 ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಕಾಡು ಹಂದಿಗಳ ಉಪಟಳ ಅತೀ ಹೆಚ್ಚಿದೆ. ಕಾಡು ಹಂದಿಗಳು ಕೃಷಿಗೆ ಮಾತ್ರವಲ್ಲ ಜನರ ಪ್ರಾಣಕ್ಕೂ ಬೆದರಿಕೆಯೊಡ್ಡುತ್ತಿದೆ. ಕಳೆದ 10 ವರ್ಷದಲ್ಲಿ ಕಾಡು ಹಂದಿಗಳ ದಾಳಿಗೆ ಜಿಲ್ಲೆಯಲ್ಲಿ 7 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 48 ಮಂದಿ ಗಾಯಗೊಂಡಿದ್ದಾರೆ. ಕಾಸರಗೋಡು ನಗರದ ತಳಂಗರೆಯಲ್ಲೂ ಹಾಡಹಗಲೇ ಮದ್ರಸಾ ವಿದ್ಯಾರ್ಥಿಯ ಮೇಲೆ ಕಾಡುಹಂದಿ ದಾಳಿ ನಡೆಸಿದ ಘಟನೆಯೂ ನಡೆದಿದೆ. ಅಕ್ರಮಣಕಾರಿ ಕಾಡುಹಂದಿಗಳನ್ನು ಗುಂಡಿಕ್ಕಿ ಕೊಲ್ಲಲು ಅರಣ್ಯ ಇಲಾಖೆ ಅನುಮತಿ ನೀಡಿದ ಬಳಿಕ ಅರಣ್ಯ ಇಲಾಖೆಯ ಮೇಲ್ನೋಟದಲ್ಲಿ ಜಿಲ್ಲೆಯಲ್ಲಿ ಈತನಕ 70ರಷ್ಟು ಕಾಡು ಹಂದಿಗಳನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಆದರೆ ಜಿಲ್ಲೆಯಲ್ಲಿ ಬಂದೂಕು ಲೈಸನ್ಸ್ ಹೊಂದಿರುವ ಹೆಚ್ಚಿನವರು ಇದಕ್ಕೆ ತಯಾರಾಗುತ್ತಿಲ್ಲ. ಆಕ್ರಮಣಕಾರಿ ಕಾಡು ಹಂದಿಗಳನ್ನು ಕೊಲ್ಲಲು ಅದಕ್ಕೆ ಹಲವು ನಿಬಂಧನೆಗಳನ್ನು ಪಾಲಿಸಬೇಕಾಗಿದೆ. ಅದುವೇ ಲೈಸನ್ಸ್ ಹೊಂದಿರುವ ಕೃಷಿಕರು ಕಾಡು ಹಂದಿಗಳನ್ನು ಗುಂಡಿಕ್ಕಿ ಕೊಲ್ಲುವ ವಿಷಯದಲ್ಲಿ ಹಿಂದೇಟು ಹಾಕುತ್ತಿರುವುದರ ಪ್ರಧಾನ ಕಾರಣವಾಗಿದೆಯೆಂದು ಹೇಳಲಾಗುತ್ತಿದೆ.