ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್‌ಫೇರ್ ಸಹಕಾರಿ ಸಂಘದಲ್ಲಿ ವಂಚನೆ ಸಿಪಿಎಂ ನೇತೃತ್ವದ ಅರಿವಿನೊಂದಿಗೆ- ಕೆ. ಶ್ರೀಕಾಂತ್
ಕಾಸರಗೋಡು: ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್‌ಫೇರ್ ಸಹಕಾರಿ ಸಂಘದ ಚಿನ್ನಾಭರಣ ಅಡವು ವಂಚನೆ ಸಿಪಿಎಂ ನೇತೃತ್ವದ ಅರಿವಿನೊಂದಿಗೆ ನಡೆದಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ. ಶ್ರೀಕಾಂತ್ ಆರೋಪಿಸಿದರು. ಆಡಳಿತ ಸಮಿತಿ ನೇತೃತ್ವ ತಿಳಿಯದೆ ಕಾರ್ಯದರ್ಶಿಗೆ ಮಾತ್ರ ಐದು ಕೋಟಿ ರೂ.ಗಳಷ್ಟು ವಂಚನೆ ನಡೆಸಲು ಸಾಧ್ಯವಿಲ್ಲವೆಂದು ಅವರು ತಿಳಿಸಿದ್ದಾರೆ. ವಂಚನೆ ಬಹಿರಂಗಗೊಂಡಾಗ ಕಾರ್ಯದರ್ಶಿ ಯನ್ನು ದೂರಿ ಬಚಾವಾಗಲು ಆಡಳಿತ ಸಮಿತಿ ಹಾಗೂ ಸಿಪಿಎಂ ನೇತೃತ್ವ ಯತ್ನಿಸುತ್ತಿದೆ ಎಂದು ಅವರು ಆರೋಪಿ ಸಿದರು. ಸಿಪಿಎಂ ನಿಯಂತ್ರಣದಲ್ಲಿರುವ ಸಣ್ಣ ಸಹಕಾರಿ ಸೊಸೈಟಿಗಳಲ್ಲಿ ಕೂಡಾ ಕೋಟ್ಯಂತರ ರೂ.ಗಳ ವಂಚನೆ ನಡೆಯುತ್ತಿದೆ. ಸಹಕಾರಿ ಸಂಸ್ಥೆಗಳನ್ನು ಭ್ರಷ್ಟಾಚಾರ ಹಾಗೂ ವಂಚನೆಗಳ ಕೇಂದ್ರವನ್ನಾಗಿ ಸಿಪಿಎಂ ಬದಲಿಸಿದೆ ಎಂದು ಶ್ರೀಕಾಂತ್ ಆರೋಪಿಸಿದರು. ವಂಚನೆ ಪ್ರಕರಣ ಬಹಿರಂಗಗೊಂಡ ಕೂಡಲೇ ಹಣವನ್ನು ಮರುಪಾವತಿ ಮಾಡಿ ಪ್ರಕರಣವನ್ನು ಮುಗಿಸಲು ಈಗ ಸಿಪಿಎಂ ಯತ್ನಿಸುತ್ತಿದೆ. ಇದರಲ್ಲಿ ಗೂಢಾಲೋಚನೆ ಇದೆ ಎಂದೂ ಸಮಗ್ರ ತನಿಖೆ ನಡೆಸಬೇಕೆಂದು ಅವರು ಆಗ್ರಹಿಸಿದರು.