ಕಾರು ಢಿಕ್ಕಿ ಹೊಡೆದು ನಿವೃತ್ತ ರೈಲ್ವೇ ಸಿಬ್ಬಂದಿ ಮೃತ್ಯು

ನೆಲ್ಲಿಕಟ್ಟೆ: ರಸ್ತೆ ಬದಿ ನಡೆದು ಕೊಂಡು ಹೋಗುತ್ತಿದ್ದ   ರೈಲ್ವೇ ಇಲಾಖೆಯ ನಿವೃತ್ತ ಸಿಬ್ಬಂದಿಗೆ ಕಾರು ಢಿಕ್ಕಿ ಹೊಡೆದು ದಾರುಣವಾಗಿ ಮೃತಪಟ್ಟ ಘಟನೆ ನೆಲ್ಲಿಕಟ್ಟೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.

ನೆಕ್ರಾಜೆ ಚೂರಿಪಳ್ಳ ಹೌಸ್‌ನ ಐತ್ತಪ್ಪ ನಾಯ್ಕ (೬೦)  ಮೃತಪಟ್ಟ ದುರ್ದೈವಿ. ಇವರು ಇಂದು ಬೆಳಿಗ್ಗೆ ನೆಲ್ಲಿಕಟ್ಟೆ ರಸ್ತೆ ಬದಿಯಲ್ಲಿ ನಡೆದು ಕೊಂಡು ಹೋಗುತ್ತಿದ್ದ ವೇಳೆ ಕಾರೊಂದು ಅವರಿಗೆ ಢಿಕ್ಕಿ ಹೊಡೆ ದಿದೆ. ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲಾಯಿತಾದರೂ ಅದು ಫಲಕಾರಿಯಾಗದೆ ಮೃತಪಟ್ಟರು.

ಮೃತದೇಹವನ್ನು ನಂತರ ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಯಿತು. ಬದಿಯಡ್ಕ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿದ್ದಾರೆ. ಢಿಕ್ಕಿ ಹೊಡೆದ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ದಿ| ಮಾಲಿಂಗ ನಾಯ್ಕ-ಕಾವೇರಿ ದಂಪತಿಯ ಪುತ್ರರಾಗಿರುವ ಐತ್ತಪ್ಪ ನಾಯ್ಕ, ಪತ್ನಿ ಶಾರದಾ, ಮಕ್ಕಳಾದ ಚಂದ್ರಶೇಖರ, ಸುಮಿತ್ರ, ಮಮತಾ, ಅಳಿಯಂದಿರಾದ ರಮೇಶ ನಾಯ್ಕ ಮತ್ತು ಸುಧಾಕರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page