ಗ್ಯಾಸ್ ಲಾರಿ ಅಪಘಾತ: ಟ್ಯಾಂಕರ್ ತೆರವು; ಹೆದ್ದಾರಿಯಲ್ಲಿ ವಾಹನ ಸಂಚಾರ ಪುನರಾರಂಭ
ಕಾಸರಗೋಡು: ಎಲ್ಪಿಜಿ ಟ್ಯಾಂಕರ್ ಲಾರಿ ಮಗುಚಿ ಸಂಭವಿಸಿದ ಅಪಘಾತದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಞಂಗಾಡ್ ಸೌತ್ನಲ್ಲಿ ನಿಯಂತ್ರಣ ಹೇರಿದ್ದ ಸಾರಿಗೆ ಸಂಚಾರವನ್ನು ಪುನರ್ ಸ್ಥಾಪಿಸಲಾಗಿದೆ. ಶುಕ್ರವಾರ ರಾತ್ರಿ 11.30ರ ವೇಳೆ ಟ್ಯಾಂಕರ್ನಿಂದ ಅನಿಲವನ್ನು ಸ್ಥಳಾಂತರಿಸುವ ಕೆಲಸ ಪೂರ್ತಿಯಾಗಿತ್ತು. 2ಗಂಟೆಯ ವೇಳೆಗೆ ಪಡನ್ನಕ್ಕಾಡ್ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರಿಗೆ ಆರಂಭಿಸಲಾಗಿದೆ.
ಸಂಭವಿಸ ಬಹುದಾಗಿದ್ದ ಭಾರೀ ದುರಂತವನ್ನು ಕಾರ್ಯದಕ್ಷತೆ ಹಾಗೂ ಜಾಗರೂ ಕತೆಯಿಂದ ಕಾರ್ಯಾಚರಿಸಿ ಹೊರತುಪಡಿಸಿದ ಎಲ್ಲರಿಗೂ ಜಿಲ್ಲಾಡಳಿತ ಅಭಿನಂದನೆ ತಿಳಿಸಿದೆ. ಹಗಲು-ರಾತ್ರಿ ದುಡಿದು ಈ ಕಾರ್ಯ ನಡೆಸಲು ಸಾಧ್ಯವಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಇಂಭಶೇಖರನ್ ನುಡಿದರು. ಗುರುವಾರ ಮಧ್ಯಾಹ್ನ 12 ಗಂಟೆಗೆ ಗ್ಯಾಸ್ ಟ್ಯಾಂಕರ್ ಮಗುಚಿದ ಸಮಯದಿಂದ ಜಿಲ್ಲಾ ವಿಕೋಪ ನಿವಾರಣೆ ಪ್ರಾಧಿಕಾರ ಫಲಪ್ರದವಾಗಿ ಹಸ್ತಕ್ಷೇಪ ನಡೆಸಿತ್ತು. ಅಧಿಕಾರಿಗಳು, ಪೊಲೀಸರು, ಜನಪ್ರತಿನಿಧಿಗಳು, ಅಗ್ನಿಶಾಮಕದಳ, ಎಚ್ಪಿಸಿಎಲ್ ವಿಭಾಗ, ಸ್ಥಳೀಯರು ಜೊತೆಯಾಗಿ ಕೈಗೊಂಡ ಕಾರ್ಯಾಚರಣೆಯಿಂದಾಗಿ ಸಂಭವಿಸಬಹುದಾ ಗಿದ್ದ ದುರಂತವನ್ನು ತಪ್ಪಿಸಲಾಗಿದೆ. ಪೊಲೀಸರು, ಅಗ್ನಿಶಾಮಕದಳ, ಕಂದಾಯ ಸಹಿತ ಎಲ್ಲಾ ಇಲಾಖೆಗಳು, ಜನಪ್ರತಿನಿಧಿಗಳು ಒಂದಾಗಿ ಕಾರ್ಯಾಚರಿಸಿದ್ದಾರೆ. ತಳಿಪ್ಪರಂಬ್ ಕುಪ್ಪಂನಿಂದ ತಲುಪಿದ ಖಲಾಸಿಗಳ ಸೇವೆಯು ಅಭಿನಂದನಾರ್ಹವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.