ಚಂದ್ರಯಾನ ೩: ಇಸ್ರೋದ ಯಶಸ್ವಿ ಸಾಧನೆಯಲ್ಲಿ ಕಾಸರಗೋಡಿನ ವಿಜ್ಞಾನಿ

ಕಾಸರಗೋಡು: ಭಾರತದ ಚಂದ್ರಯಾನ-೩ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆಗಿದೆ. ಇದೇ ಮೊದಲ ಬಾರಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸಿದ ಭಾರತ ವಿಶ್ವವನ್ನೇ ತನ್ನತ್ತ ತಿರುಗಿಸಿದೆ. ಇದೀಗ ಭಾರತ ಚಂದ್ರನ ಮೇಲಿದೆ. ಇಸ್ರೋ ಹಾಗೂ ಭಾರತದ ಸಾಧನೆಗೆ ದೇಶ, ವಿದೇಶಗಳಿಂದ ಅಭಿನಂದನೆಗಳು ಹರಿದು ಬರುತ್ತಿವೆ.

ಇಡೀ ಜಗತ್ತಿನಲ್ಲೇ ಅತೀ ದೊಡ್ಡ ಸಾಧನೆಗೈದ ಇಸ್ರೋದ ವಿಜ್ಞಾನಿಗಳ ತಂಡದಲ್ಲಿ  ಕಾಸರಗೋಡಿನ ಕೃಷ್ಣ ಮೋಹನ ಶ್ಯಾನುಭೋಗರೂ ಇದ್ದಾರೆ ಎಂಬುವುದು ಹೆಮ್ಮೆಯ ವಿಷಯವಾಗಿದೆ. ಚೆಂಗಳ ಬಳಿಯ ಎರಿ ಯಪಾಡಿ ನಿವಾಸಿ  ದಿ| ವಿಷ್ಣು ಶ್ಯಾನು ಭೋಗ್- ಪ್ರೇಮಾವತಿ ದಂಪತಿಯ ಪುತ್ರನಾದ ಕೃಷ್ಣಮೋಹನ ಶ್ಯಾನುಭೋ ಗರು ಪ್ರಾಥಮಿಕ ಶಿಕ್ಷಣವನ್ನು  ಪಾಡಿ ಎಲ್‌ಪಿ ಶಾಲೆಯಲ್ಲಿ, ಎಸ್‌ಎಸ್ ಎಲ್‌ಸಿ ಶಿಕ್ಷಣವನ್ನು ೧೯೮೧ರಲ್ಲಿ  ಕಾಸರಗೋಡಿನ ಬಿ.ಇ.ಎಂ. ಹೈಸ್ಕೂಲಿನಲ್ಲಿ ಪೂರ್ತಿಗೊಳಿಸಿದರು. ಪಿಯುಸಿಯನ್ನು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ, ಪೂರ್ತಿಗೊಳಿಸಿದ್ದಾರೆ. ಅನಂತರ ಬಿಟೆಕ್ ಭೋಪಾಲ್‌ನಲ್ಲೂ, ಎಂಟೆಕ್ ಸುರತ್ಕಲ್ ನಲ್ಲಿ ಪೂರ್ತಿಗೊಳಿಸಿದ ಬಳಿಕ ದೇಶದ ವಿಜ್ಞಾನರಂಗದಲ್ಲಿ ಸೇವೆ ಸಲ್ಲಿಸುವ ಭಾಗ್ಯ ಲಭಿಸಿತು. ಆರಂಭದಲ್ಲಿ ಇಸ್ರೋದ ತಿರುವನಂತಪುರದ ಘಟಕದಲ್ಲಿ ಉದ್ಯೋಗಕ್ಕೆ ನೇಮಕಗೊಂಡರು.  ಚಂದ್ರಯಾನ ೨ರ ಸಿದ್ಧತೆ ನಡೆಸುವ ಅಂಗವಾಗಿ ಬಳಿಕ ಇಸ್ರೋದ ಬೆಂಗಳೂರು ಘಟಕಕ್ಕೆ ವರ್ಗಾವಣೆಗೊಂಡಿದ್ದರು. ಅನಂತರ ಇದೀಗ ಚಂದ್ರಯಾನ-೩ರ ಯಶಸ್ವಿ ಸಾಧನೆಯಲ್ಲಿ ಪ್ರಮುಖ ಪಾತ್ರವನ್ನು ಕೃಷ್ಣ ಮೋಹನ ಶ್ಯಾನುಭೋಗರು ವಹಿಸಿದ್ದಾರೆ.

ಉಪಗ್ರಹ ಸಂಚರಿಸಲು ಅಗತ್ಯವುಳ್ಳ ಇಂಧನ ಸೆಕ್ಷನ್‌ನ ಜನರಲ್ ಮೆನೇಜರ್ ಹಾಗೂ ಡೈರೆಕ್ಟರ್ ಆಗಿ ಕೃಷ್ಣಮೋಹನ ಶ್ಯಾನುಭೋಗ್ ಕರ್ತವ್ಯ ನಿರ್ವಹಿಸಿದ್ದಾರೆ.  ಚಂದ್ರಯಾನ-೩ರ ಯಶಸ್ವಿ ಸಾನೆಯಲ್ಲಿ ಕಾರ್ಯಾಚರಿಸಿದ ಕೃಷ್ಣಮೋಹನ್ ಅವರಿಗೆ ಅಭಿನಂದನೆಗಳು ಹರಿದು ಬರುತ್ತಿದೆ. ಕೃಷ್ಣಮೋಹನ್ ಅವರು ಪತ್ನಿ ಕವಿತಾ, ಮಕ್ಕಳಾದ ಶ್ರಾವ್ಯ, ಶ್ರೇಯರೊಂದಿಗೆ ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ನಿವೃತ್ತ ಬ್ಯಾಂಕ್ ಜನರಲ್ ಮೆನೇಜರ್ ಶ್ಯಾಮ್ ಪ್ರಸಾದ್, ವಯೋಲಿನ್ ವಾದಕ ವೇಣುಗೋಪಾಲ, ವತ್ಸಲ ಜಯಪ್ರಕಾಶ್ (ಉಡುಪಿ), ಶಶಿಕಲ (ಮವ್ವಾರು) ಸಹೋದರ- ಸಹೋದರಿಯರಾಗಿದ್ದಾರೆ.

Leave a Reply

Your email address will not be published. Required fields are marked *

You cannot copy content of this page