ಜೂನ್ 9ರಂದು ಮಧ್ಯರಾತ್ರಿಯಿಂದ ಟ್ರೋಲಿಂಗ್ ನಿಷೇಧ ಜ್ಯಾರಿ
ಕಾಸರಗೋಡು: ರಾಜ್ಯವ್ಯಾಪ್ತಿ ಗೊಳಪಟ್ಟ ಸಮುದ್ರದಲ್ಲಿ ಜೂನ್ 9ರಂದು ರಾತ್ರಿ 12 ಗಂಟೆಯಿಂದ ಮೀನುಗಾರಿಕೆಗೆ(ಟ್ರೋಲಿಂಗ್) ನಿಷೇಧ ಹೇರಲಾಗುವುದು. ಈ ನಿಷೇಧ ಅಂದಿನಿಂದ ಮುಂದಿನ 52 ದಿನಗಳ ತನಕ ಮುಂದುವರಿಯಲಿದ್ದು, ಜುಲೈ 31ರಂದು ರಾತ್ರಿ ಕೊನೆಗೊಳ್ಳಲಿದೆ.
ಮೀನುಗಾರಿಕಾ ಸಚಿವ ಸಜಿ ಚೆರಿಯನ್‌ರ ಅಧ್ಯಕ್ಷತೆಯಲ್ಲಿ ನಡೆದ ಅವಲೋಕನಾ ಸಭಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಟ್ರೋಲಿಂಗ್ ನಿಷೇಧದಿಂದಾಗಿ ಈ ಅವಧಿಯಲ್ಲಿ ಯಾಂತ್ರೀಕೃತ ಬೋಟ್‌ಗಳು ಸಮುದ್ರಕ್ಕಿಳಿದು ಮೀನುಗಾರಿಕೆ ನಡೆಸುವಂತಿಲ್ಲ. ಆದರೆ ಸಾಂಪ್ರದಾಯಿಕವಾಗಿ ನಾಡದೋಣಿ ಗಳಲ್ಲಿ ಮೀನುಗಾರಿಕೆ ನಡೆಸಲು ಅನುಮತಿ ನೀಡಲಾಗುವುದು.
ಮಳೆಗಾಲ ಮೀನುಗಳ ಸಂತಾನೋತ್ಪತ್ತಿಯ ಋತುವಾಗಿದ್ದು ಆ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಮತ್ಸ್ಯ ಸಂಪತ್ತನ್ನು ಉಳಿಸಿ ಸಂರಕ್ಷಿಸಲು ಮಳೆಗಾಲದಲ್ಲಿ ಪ್ರತೀ ವರ್ಷವೂ ಟ್ರೋಲಿಂಗ್ ನಿಷೇಧ ಜ್ಯಾರಿಗೊಳಿಸಲಾಗುತ್ತಿದೆ.
ಎಲ್ಲಾ ಜಿಲ್ಲೆಗಳಲ್ಲೂ ಕಂಟ್ರೋಲ್ ರೂಂ ಆರಂಭ
ಸಮುದ್ರದಲ್ಲಿ ಆಳೆತ್ತರದ ಅಲೆಗಳು ಎದ್ದೇಳುತ್ತಿರುವ ಹಾಗೂ ಇನ್ನೊಂದೆಡೆ ಹಲವೆಡೆ ಕಡಲ್ಕೊರೆತವೂ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಕಾಸರಗೋಡು ಸೇರದಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ 24 ತಾಸುಗಳ ತನಕ ಕಾರ್ಯವೆಸಗುತ್ತಿರುವ ಫಿಶರೀಸ್ ಕಂಟ್ರೋಲ್ ರೂಂಗಳನ್ನು ಆರಂಭಿಸಲಾಗಿದೆ.
ಮರೈನ್ ಎನ್‌ಫೋರ್ಸ್ ಮೆಂಟ್, ಕರಾವಳಿ ಪೊಲೀಸರು, ಭಾರತೀಯ ನೌಕಾ ಪಡೆ ಮತ್ತು ಭಾರತೀಯ ಕೋಸ್ಟ್ ಗಾರ್ಡ್‌ಗಳನ್ನು ಇದರ ಸೇವೆಗಾಗಿ ಸಜ್ಜೀಕರಿಸಿ ನಿಲ್ಲಿಸಲಾಗಿದೆ.