ತಲೆ ಕಡಿದು ಯುವಕನನ್ನು ಕೊಲೆಗೈದ ಪ್ರಕರಣ : ಆರು ಆರೋಪಿಗಳಿಗೆ ಜೀವಾವಧಿ ಸಜೆ, ಜುಲ್ಮಾನೆ
ಕಾಸರಗೋಡು: ಅಕ್ರಮ ಹೊಯ್ಗೆ ಸಾಗಾಟದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ಆರೋಪಿಸಿ ಯುವಕ ನನ್ನು ತಲೆ ಕಡಿದು ಕೊಲೆಗೈದ ಪ್ರಕರಣದ ಆರು ಮಂದಿ ಆರೋಪಿಗಳಿಗೆ ಕಾಸರ ಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶರಾದ ಪ್ರಿಯಾ ಕೆ. ಅವರು ಜೀವಾವಧಿ ಸಜೆ ಹಾಗೂ ತಲಾ ಒಂದೂವರೆ ಲಕ್ಷ ರೂ.ನಂತೆ ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.
ಇದರ ಹೊರತಾಗಿ ಕೊಲೆಯತ್ನ, ಇರಿದು ಗಂಭೀರವಾಗಿ ಗಾಯಗೊಳಿಸು ವಿಕೆ ಇತ್ಯಾದಿ ಸೆಕ್ಷನ್ಗಳಂತೆ ಆರೋಪಿಗಳಿಗೆ ತಲಾ ಹತ್ತು ವರ್ಷ ೩ ತಿಂಗಳು ಎಂಬಂತೆ ಕಠಿಣ ಸಜೆ ಹಾಗೂ ಐವತ್ತು ಸಾವಿರ ರೂ.ನಂತೆ ಜುಲ್ಮಾನೆ ಯನ್ನೂ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿಗಳು ಎರಡು ವರ್ಷ ಹೆಚ್ಚುವರಿ ಸಜೆ ಅನುಭವಿಸ ಬೇಕು. ಜುಲ್ಮಾನೆ ಪಾವತಿಸದಿದ್ದಲ್ಲಿ ಆ ಮೊತ್ತದಲ್ಲಿ ಆರು ಲಕ್ಷ ರೂ.ವನ್ನು ಕೊಲೆಗೈಯ್ಯಲ್ಪಟ್ಟ ಸಲಾಂನ ಕುಟುಂಬಕ್ಕೆ ಹಾಗೂ ಎರಡು ಲಕ್ಷ ರೂ.ವನ್ನು ಈ ಘಟನೆಯಲ್ಲಿ ಗಂಭೀರ ಇರಿತಕ್ಕೊಳ ಗಾದ ಸಲಾಂನ ಸ್ನೇಹಿತ ನೌಶಾದ್ನಿಗೆ ನೀಡಬೇಕೆಂದೂ ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿದೆ.
ಕುಂಬಳೆಗೆ ಸಮೀಪದ ಕೊಪಾಡಿ ಬದ್ರಿಯಾ ನಗರದ ಸೂಫಿಯಾನ್ ಮಂಜಿಲ್ನ ಅಬೂಬಕರ್ ಸಿದ್ದೀಕ್ (ಮಾಂಙಮುಡಿ ಸಿದ್ದೀಕ್- 39), ಪೇರಾಲ್ನ ಸಿರಾಜ್ ಕ್ವಾರ್ಟರ್ಸ್ನ ಕೆ.ಎಸ್. ಉಮ್ಮರ್ ಫಾರೂಕ್ (29), ಕುಂಬಳೆ ಪೆರುವಾಡ್ ಪಟ್ರೋಲ್ ಬಂಕ್ ಬಳಿ ಬಾಡಿಗೆ ಕ್ವಾರ್ಟರ್ಸ್ನಲ್ಲಿ ವಾಸಿಸುತ್ತಿರುವ ವಿ. ಎ. ಶಹೀರ್ (32), ಆರಿಕ್ಕಾಡಿ ನಿಯಾಸ್ ಮಂಜಿಲ್ನ ನಿಯಾಸ್ (31), ಆರಿಕ್ಕಾಡಿ ಮಳಿ ಹೌಸ್ನ ಹರೀಶ್ (29) ಮತ್ತು ಕುಂಬಳೆ ಕೊಯ್ಪಾಡಿ ಬದ್ರಿಯಾ ನಗರ ಮಾಳಿಯಂಗರ ಕ್ವಾರ್ಟರ್ಸ್ನ ಲತೀಫ್ (36) ಎಂಬವರಿಗೆ ಈ ಶಿಕ್ಷೆ ವಿಧಿಸಲಾಗಿದೆ. ಆರೋಪಿಗಳಿಗೆ ಸಹಾಯ ಒದಗಿಸಿದ ಆರೋಪಿಗಳಾದ ಕುಂಬಳೆ ಕೊಪಾಡಿ ಎತ್ತಿಯಾರ್ ಮಾಲೆಯ ಆದೂರು ಖಲೀಲ್ ಮತ್ತು ಸೂರಂ ಬೈಲು ಜಿ.ಕೆ. ನಗರದ ಪಿ. ಅರುಣ್ ಕುಮಾರ್ ಎಂಬವರ ಮೇಲಿನ ಆರೋಪ ವಿಚಾರಣೆ ಯಲ್ಲಿ ಸಾಬೀತುಗೊಳ್ಳದ ಹಿನ್ನೆಲೆಯಲ್ಲಿ ನ್ಯಾಯಾಲಯ ಅವರನ್ನು ಖುಲಾಸೆ ಗೊಳಿಸಿ ತೀರ್ಪು ನೀಡಿದೆ.
2017 ಎಪ್ರಿಲ್ 30ರ ಸಂಜೆ ಮೊಗ್ರಾಲ್ ಮಾಳಿಯಂಗರ ಕೋಟೆ ಎಂಬಲ್ಲಿ ಕುಂಬಳೆ ಪೇರಾಲ್ ಪೊಟ್ಟೇರಿಮೂಲೆಯ ಅಬ್ದುಲ್ ಸಲಾಂ (26) ಎಂಬಾತನನ್ನು ಕೊಲೆಗೈದ ಪ್ರಕರಣದಲ್ಲಿ ಈ ಆರೋಪಿಗಳಿಗೆ ಈ ಶಿಕ್ಷೆ ವಿಧಿಸಲಾಗಿದೆ.
ಕೊಲೆ ನಡೆದ ದಿನಗಳ ಹಿಂದೆ ಈ ಪ್ರಕರಣದ ಆರೋಪಿಗಳಲ್ಲೋರ್ವನಾಗಿ ರುವ ಅಬೂಬಕ್ಕರ್ ಸಿದ್ದೀಕ್ ಹೊಗೆ ಸಾಗಿಸುತ್ತಿದ್ದ ಲಾರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಅದರ ಹೆಸರಲ್ಲಿ ಈ ಪ್ರಕರಣದ ಆರೋಪಿಗಳಲ್ಲೋ ರ್ವನ ಮತ್ತು ಕೊಲೆಗೈಯ್ಯಲ್ಪಟ್ಟ ಸಲಾಂ ರ ಮಧ್ಯೆ ವಾಗ್ವಾದ ನಡೆದಿತ್ತೆಂದೂ, ಅದನ್ನು ಇತ್ಯರ್ಥಪಡಿಸುವ ಹೆಸರಲ್ಲಿ ಬಳಿಕ ಸಲಾಂನನ್ನು ಮಾಳಿಯಂಗರ ಕೋಟೆಯ ಬಳಿ ಕರೆಸಿ ಅಲ್ಲಿ ಆತನ ತಲೆ ಕಡಿದು ಕೊಲೆಗೈಯ್ಯಲಾ ಯಿತೆಂದೂ ಪೊಲೀಸ್ ಕೇಸಿನಲ್ಲಿ ಆರೋಪಿಸಲಾಗಿದೆ.
ಈ ಕೊಲೆ ನಡೆದ ವೇಳೆ ಸಲಾಂನ ಜೊತೆಗೆ ಅಲ್ಲಿಗೆ ಬಂದಿದ್ದ ಆತನ ಸ್ನೇಹಿತ ನೌಶಾದ್ ಎಂಬಾತನಿಗೆ ಇರಿದು ಗಂಭೀರ ಗಾಯಗೊಳಿಸ ಲಾಗಿತ್ತು. ಕೊಲೆ ನಡೆದ ಸ್ಥಳದಿಂದ 25 ಮೀಟರ್ ದೂರದಲ್ಲಿ ಸಲಾಂನ ರುಂಡ ಪತ್ತೆಯಾಗಿತ್ತು. ಅಂದು ಕುಂಬಳೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿದ್ದು, ಈಗ ಬೇಕಲ ಡಿವೈಎಸ್ಪಿ ಯಾಗಿರುವ ವಿ.ವಿ. ಮನೋಜ್ ಈ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರೋಸಿಕ್ಯೂಷನ್ ಪರ ಪಬ್ಲಿಕ್ ಪ್ರೋಸಿಕ್ಯೂಟರ್ ಜಿ. ಚಂದ್ರಮೋಹನ್ ನ್ಯಾಯಾಲಯದಲ್ಲಿ ವಾದಿಸಿದ್ದರು.