ತಾಯಿ, ಮಗು ಕೆರೆಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ : ಏಳ್ಕಾನ ಸಮೀಪ ದಾರುಣ ಘಟನೆ; ಶೋಕಸಾಗರ
ಪೆರ್ಲ: ತಾಯಿ ಮತ್ತು ಅವರ ಎರಡು ವರ್ಷದ ಮಗು ಕೆರೆಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆಯಿಂದ ಏಳ್ಕಾನದಲ್ಲಿ ಶೋಕಸಾಗರ ಸೃಷ್ಟಿಸಿದೆ. ಏಳ್ಕಾನ ದಡಿಗಮೂಲೆ ನಿವಾಸಿ ಪರಮೇಶ್ವರಿ (42) ಮತ್ತು ಅವರ ಪುತ್ರಿ ಎರಡೂವರೆ ವರ್ಷದ ಪದ್ಮಿನಿ ಸಾವನ್ನಪ್ಪಿದ ದುರ್ದೈವಿಗಳು. ಇವರು ಮನೆ ಪಕ್ಕದ ಕಟ್ಟೆಯಿಲ್ಲದ ಕೆರೆಯಲ್ಲಿ ನಿನ್ನೆ ಸಂಜೆ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಪರಮೇಶ್ವರಿಯವರ ಪತಿ ಈಶ್ವರ ನಾಯ್ಕ ಮತ್ತು ಹಿರಿಯ ಪುತ್ರ ಹರಿಪ್ರಸಾದ್ ನಿನ್ನೆ ಸಂಜೆ ಮನೆಯಿಂದ ಅಲ್ಪ ದೂರದಲ್ಲಿರುವ ದೇವಸ್ಥಾನದ ಉತ್ಸವಕ್ಕೆ ಹೋಗಿದ್ದರು. ಅಲ್ಲಿಂದ ಅವರಿಬ್ಬರು ಸಂಜೆ ಮನೆಗೆ ಹಿಂತಿರುಗಿದಾಗ ಪರಮೇಶ್ವರಿ ಮತ್ತು ಪುತ್ರಿ ಪದ್ಮಿನಿ ನಾಪತ್ತೆಯಾಗಿರುವುದನ್ನು ಗಮನಿಸಿದ್ದಾರೆ. ಅಸೌಖ್ಯದಿಂದ ಶಯ್ಯಾವಸ್ಥೆಯಲ್ಲಿರುವ ಈಶ್ವರ ನಾಯ್ಕರ ಸಹೋದರ ಶಿವಪ್ಪ ನಾಯ್ಕ ಮಾತ್ರವೇ ಆ ವೇಳೆ ಮನೆಯಲ್ಲಿದ್ದರು. ನಾಪತ್ತೆಯಾದ ಪತ್ನಿ ಮತ್ತು ಮಗುವಿಗಾಗಿ ಈಶ್ವರ ನಾಯ್ಕರು ಹುಡುಕಾಟದಲ್ಲಿ ತೊಡಗಿದಾಗ ತಾಯಿ ಮತ್ತು ಮಗುವಿನ ಮೃತದೇಹಗಳು ಅಲ್ಲೇ ಪಕ್ಕದ ಕೆರೆಯಲ್ಲಿ ಪತ್ತೆಯಾಗಿದೆ. ವಿಷಯ ತಿಳಿದು ಬದಿಯಡ್ಕ ಪೊಲೀಸರು ಸ್ಥಳಕ್ಕೆ ತಲುಪಿ ಮಹಜರು ನಡೆಸಿದ ಬಳಿಕ ಮೃತದೇಹಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ತಾಯಿ ಹಾಗೂ ಮಗಳು ಕೆರೆಗೆ ಬೀಳಲು ಕಾರಣವೇನೆಂದು ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸರು ಸಮಗ್ರ ತನಿಖ ಆರಂಭಿಸಿದ್ದಾರೆ. ತಾಯಿ ಹಾಗೂ ಮಗುವಿನ ದಾರುಣ ಮೃತ್ಯುವಿನಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ.