ತೃಕನ್ನಾಡ್‌ನಲ್ಲಿ ಕಡಲ್ಕೊರೆತ ತೀವ್ರ: ರಾಜ್ಯ ಹೆದ್ದಾರಿ ನೀರುಪಾಲಾಗುವ ಭೀತಿ
ಬೇಕಲ: ತೃಕನ್ನಾಡ್‌ನಲ್ಲಿ 30 ಮೀಟರ್‌ನಷ್ಟು ಭೂಮಿಯನ್ನು ಸಮುದ್ರ ಸ್ವಾಹ ಮಾಡಿದೆ. ಇದರಿಂದಾಗಿ ರಾಜ್ಯ ಹೆದ್ದಾರಿ ಅಪಾಯಕರ ಸ್ಥಿತಿಗೆ ತಲುಪಿದೆ. ರಸ್ತೆಯ ಒಂದು ಬದಿಯಲ್ಲಿ ಪ್ರಸಿದ್ಧವಾದ ತೃಕನ್ನಾಡ್ ಶ್ರೀ ತ್ರಯಂಬಕೇಶ್ವರ ದೇವಸ್ಥಾನವಿದೆ. ಹೆದ್ದಾರಿಯಲ್ಲಿ ಹಾಕಿದ ಡಾಮರುವರೆಗೆ ಎರಡು ಮೀಟರ್‌ನಷ್ಟು ಕುಸಿದು ಮಣ್ಣು ಸಮುದ್ರಕ್ಕೆ ಸೇರಿದೆ. ರಾಜ್ಯ ಹೆದ್ದಾರಿ, ಕ್ಷೇತ್ರ ಹಾಗೂ ಸಮುದ್ರ ನಡುವಿನ ಅಂತರ ಕೇವಲ 35 ಮೀಟರ್ ಆಗಿ ಈಗ ಕಡಿಮೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಸಂಭವಿಸಿದ ಕಡಲ್ಕೊರೆತದಲ್ಲಿ ಸಮೀಪದಲ್ಲಿದ್ದ ಕೊಡುಂಙಲ್ಲೂರಮ್ಮ ಮಂದಿರ ಅರ್ಧದಷ್ಟು ನೀರುಪಾಲಾಗಿದೆ. ಇದೇ ಸ್ಥಿತಿಯಲ್ಲಿ ಕಡಲ್ಕೊರೆತ ಮುಂದುವರಿದರೆ ಶೀಘ್ರವೇ ರಾಜ್ಯ ಹೆದ್ದಾರಿ ಕೂಡಾ ಸಮುದ್ರಪಾಲಾಗಬಹುದೆಂಬ ಭೀತಿಯಿದೆ. ಇಲ್ಲಿನವರು ಈ ಬಗ್ಗೆ ಸೂಚಿಸಿದರೂ ಅಧಿಕಾರಿಗಳು ಕಿವಿಗೆ ಹಾಕಿಕೊಳ್ಳಲಿಲ್ಲವೆಂದು ಸ್ಥಳೀಯರು ದೂರಿದ್ದಾರೆ.
ಕ್ಷೇತ್ರದ ಸಮುದ್ರ ತೀರದಲ್ಲಿ ಕರ್ಕಾಟಕ ಅಮಾವಾಸ್ಯೆ ವೇಳೆ ಸಾವಿರಾರು ಮಂದಿ ಪಿತ್ತರ್ಪಣ ನೀಡಲು ತಲುಪುವ ಕ್ರಮವಿದೆ. ಈ ತಿಂಗಳ 24ರಂದು ಕರ್ಕಾಟಕ ಅಮಾವಾಸ್ಯೆಯಾಗಿದ್ದು, ಈ ಬಾರಿ ಇಲ್ಲಿ ಪಿತ್ತರ್ಪಣ ನಡೆಸಲು ಸ್ಥಳದ ಸಮಸ್ಯೆ ಉಂಟಾಗಲಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.