ತ್ಯಾಜ್ಯಮುಕ್ತ ನವಕೇರಳಕ್ಕೆ ಸಿದ್ಧತೆ ನಡೆಯುತ್ತಿರುವಾಗಲೇ ಕುಂಬಳೆಯಲ್ಲಿ ತ್ಯಾಜ್ಯರಾಶಿ ಪತ್ತೆ

ಕುಂಬಳೆ: ತ್ಯಾಜ್ಯಮುಕ್ತ ನವಕೇರಳ ಅಭಿಯಾನಕ್ಕೆ ನಾಡು, ನಗರ ಸಿದ್ಧಗೊಂಡಿರುವಾಗಲೇ ವಿವಿಧೆಡೆ ಈಗಲೂ ತ್ಯಾಜ್ಯ ರಾಶಿಯೇ ಕಂಡುಬರುತ್ತಿದೆ.

ಕುಂಬಳೆ ರೈಲ್ವೇ ನಿಲ್ದಾಣ, ಸಿಎಚ್‌ಸಿ ರಸ್ತೆಯಲ್ಲಿ ತ್ಯಾಜ್ಯ ರಾಶಿ ಬಿದ್ದುಕೊಂಡಿದೆ. ಇಲ್ಲಿನ ಚರಂಡಿ  ಪೂರ್ತಿ ತ್ಯಾಜ್ಯ ತುಂಬಿಕೊಂಡಿದ್ದು, ಮಳೆ ನೀರು ಹರಿದು ಹೋಗಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ.

ಕೇಂದ್ರ, ರಾಜ್ಯ ಸರಕಾರಗಳು ತ್ಯಾಜ್ಯದ ವಿರುದ್ಧ ಭಾರೀ ಪ್ರಚಾರ, ತಿಳುವಳಿಕಾ ಕಾರ್ಯಕ್ರಮಗಳನ್ನು ನಡೆಸುತ್ತಿರುವಾಗಲೇ ಕುಂಬಳೆಯ ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಎಸೆಯಲಾಗುತ್ತಿದೆ.

೨೦೨೫ ಜನವರಿ ೨೬ರಂದು ಕಾಸರಗೋಡನ್ನು ತ್ಯಾಜ್ಯಮುಕ್ತವಾಗಿ ಘೋಷಿಸಲಾಗುವುದು. ತ್ಯಾಜ್ಯಮುಕ್ತ ನವಕೇರಳದ ಅಂಗವಾಗಿ ಗಾಂಧಿ ಜಯಂತಿ ದಿನವಾದ ಇಂದು ಜಿಲ್ಲೆಯಲ್ಲಿ ವಾರ್ಡ್ ಮಟ್ಟದಲ್ಲಿ ಶುಚೀಕರಣ ಕಾರ್ಯಕ್ರಮಗಳನ್ನು ನಡೆಸಲು ಸರಕಾರ, ಜಿಲ್ಲಾಡಳಿತ ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳು ಕರೆ ನೀಡಿರುವಾಗಲೇ ಕುಂಬಳೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವುದು ಮುಂದುವರಿದೆ.

ತ್ಯಾಜ್ಯಸಂಸ್ಕರಣೆಗೆ ಹಲವಾರು ಯೋಜನೆಗಳನ್ನು  ಜ್ಯಾರಿಗೊಳಿಸ ಲಾಗಿದೆ. ಹಸಿರು ಕ್ರಿಯಾ ಸೇನೆ ಮನೆ ಗಳಿಗೆ ಹಾಗೂ ವ್ಯಾಪಾರ ಸಂಸ್ಥೆಗಳನ್ನು  ಕೇಂದ್ರೀಕರಿಸಿ ತ್ಯಾಜ್ಯ ಸಂಗ್ರಹಿಸುತ್ತಿದ್ದಾರೆ. ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ತ್ಯಾಜ್ಯ ಎಸೆಯುವವರನ್ನು  ಪತ್ತೆಹಚ್ಚಿ ದಂಡ ವಸೂಲು ಮಾಡಲಾಗುತ್ತಿದೆ. ಹಾಗಿದ್ದರೂ ಕೆಲವರು ಈಗಲೂ ಸಾರ್ವಜನಿಕ ಸ್ಥಳದಲ್ಲೇ ತ್ಯಾಜ್ಯ ಎಸೆಯುತ್ತಿದ್ದಾರೆ.

ಕುಂಬಳೆ ರೈಲ್ವೇ ನಿಲ್ದಾಣ-ಸಿಎಚ್‌ಸಿ ರಸ್ತೆಯಲ್ಲಿ  ತ್ಯಾಜ್ಯ ತುಂಬಿಕೊಂಡಿದ್ದರೂ ಶುಚೀಕರಣ ನಡೆಯದ ಹಿನ್ನೆಲೆಯಲ್ಲಿ ಈ ಮಳೆಗಾಲದಲ್ಲಿ ನೀರು ಪೂರ್ಣವಾಗಿ ರಸ್ತೆಯಲ್ಲೇ ಹರಿದಿದೆ. ಹಗಲು-ರಾತ್ರಿಯೆಂಬ ವ್ಯತ್ಯಾಸವಿಲ್ಲದೆ ತ್ಯಾಜ್ಯ ಹಾಗೂ ನಿಷೇಧಿತ ಪ್ಲಾಸ್ಟಿಕ್ ಚೀಲಗಳನ್ನು ಚರಂಡಿಗೆ ಎಸೆಯಲಾಗುತ್ತಿದೆ.  ಈ ಪ್ರದೇಶದಲ್ಲಿ ಸಿಸಿ ಕ್ಯಾಮರಾಗಳು ಇಲ್ಲದಿರುವುದು ತ್ಯಾಜ್ಯ ಎಸೆಯುವವರಿಗೆ ವರದಾನವಾಗಿದೆ. ಈ ಪ್ರದೇಶದಲ್ಲಿ ಬೀದಿ ನಾಯಿಗಳ ಉಪಟಳವೂ ತೀವ್ರಗೊಂಡಿದೆ.

ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವುದು ಕಂಡುಬಂದಲ್ಲಿ ತಿಳಿಸಲು ಕೇಂದ್ರ, ರಾಜ್ಯ ಸರಕಾರಗಳು ವಾಟ್ಸಪ್  ಸೌಕರ್ಯ ಏರ್ಪಡಿಸಿದ್ದರೂ ಅದನ್ನು ಬಳಸಲು ಯಾರೂ ಮುಂದೆ ಬರುತ್ತಿಲ್ಲವೆನ್ನಲಾಗಿದೆ.

ತ್ಯಾಜ್ಯಮುಕ್ತ ನವಕೇರಳ ಅಭಿಯಾನದಂಗವಾಗಿ ತ್ಯಾಜ್ಯ ಎಸೆಯುವುದು, ಉರಿಸುವುದು ಕಂಡುಬಂದಲ್ಲಿ ತಿಳಿಸಲು ಏರ್ಪಡಿಸಿದ ವಾಟ್ಸಪ್ ಸೌಕರ್ಯವನ್ನು ಸಚಿವ ಎಂ.ಬಿ. ರಾಜೇಶ್ ಇತ್ತೀಚೆಗೆ ಕೊಲ್ಲಂನಲ್ಲಿ  ಉದ್ಘಾಟಿಸಿದ್ದರು. ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವುದು ಕಂಡುಬಂದಲ್ಲಿ 9446700800 ಎಂಬ ವಾಟ್ಸಪ್ ನಂಬ್ರದಲ್ಲಿ ತಿಳಿಸುವಂತೆ ವಿನಂತಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page